ಇತ್ತೀಚೆಗಷ್ಟೆ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅ.26 ಮತ್ತು ಅ.27ರ ಬಿಗ್ ಬಾಸ್ ವೀಕೆಂಡ್ ಸಂಚಿಕೆಯನ್ನು ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಇವರ ಬದಲು ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಬಂದಿದ್ದರು. ಸುದೀಪ್ ಅವರು ಅ. 19 ರಂದು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು.
ಈ ವಾರ ಸುದೀಪ್ ಶೋ ನಡೆಸಿ ಕೊಡಲು ಬರುತ್ತಾರ ಅಥವಾ ಇಲ್ಲವೇ ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೀಗ ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಕಿಚ್ಚ ಸುದೀಪ್ ಹಾಜರಾಗಿದ್ದರು. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್ಬಾಸ್ ವೇದಿಕೆಗೆ ಮರಳಿದರು. ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ಇದನ್ನು ಸ್ಪರ್ಧಿಗಳ ಎದುರು ತೋರಿಸದೆ ಅವರನ್ನು ನಗಿಸಿದರು.
ನೋವು ಇದ್ದರೂ ಕೂಡ ಸುದೀಪ್ ಭಾನುವಾರದ ಎಪಿಸೋಡ್ ಅನ್ನು ನಗುವಿನ ಮೂಲಕ ತುಂಬಿದರು. ಈ ಸಂಚಿಕೆಯಲ್ಲಿ ನಗೋಣ, ನಗಿಸೋಣ ಎನ್ನುತ್ತಲೇ ಎಪಿಸೋಡ್ ಆರಂಭಿಸಿದರು. ದೊಡ್ಮನೆಯೊಳಗೆ ಎಲ್ಲರಿಗೂ ನಗು ಮೂಡಿಸುವ ರೀತಿಯ ಕೆಲಸ ಟಾಸ್ಕ್ಗಳನ್ನು ಅವರು ನೀಡಿದರು. ಧನರಾಜ್, ಹನುಮಂತ, ಉಗ್ರಂ ಮಂಜು ಮುಂತಾದವರಿಂದ ಕಾಮಿಡಿ ಮಾಡಿಸಿದರು.
ಸುದೀಪ್ ತಾಯಿಗೆ ಶ್ರದ್ಧಾಂಜಲಿ: ಶನಿವಾರದ ಎಪಿಸೋಡ್ನ ಆರಂಭದಲ್ಲಿ ವೇದಿಕೆಯಲ್ಲೇ ತಾಯಿಯನ್ನು ನೆನೆದು ಸುದೀಪ್ ಕಣ್ಣೀರಿಟ್ಟರು. ವಾಸುಕಿ ವೈಭವ್ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡು ಹಾಡು ಹಾಡಿದರು. ಬಿಗ್ ಬಾಸ್ ಸುದೀಪ್ ಅವರಿಗೆ ಸಾಂತ್ವನ ನೀಡಿದರು. ಕಿಚ್ಚ ಅವರ ಮುಂದೆ ಅವರ ತಾಯಿ ಫೋಟೋವನ್ನು ಹಾಕಿ, ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ.. ಎಂಬ ಮಾತನ್ನು ಬಿಗ್ ಬಾಸ್ ಆಡಿದ್ದರು. ತಾಯಿಯ ಭಾವಚಿತ್ರವನ್ನು ನೋಡುತ್ತಾ ಕಿಚ್ಚ ನಿಂತಲ್ಲೇ ನಿಂತು ಮಾತು ಬಾರದೆ, ನೋವನ್ನು ನುಂಗಿ ಕಣ್ಣೀರಿಟ್ಟಿದ್ದರು.
BBK 11: ಅವಳ ಪರವಾಗಿ ನಾನು ಕ್ಷಮೆ ಕೇಳುತ್ತೇವೆ: ಮಾನಸಾ ಔಟಾದ ಬೆನ್ನಲ್ಲೇ ತುಕಾಲಿ ಸಂತು ಮಾತು