Thursday, 26th December 2024

Max Movie Collection: ‘ಮ್ಯಾಕ್ಸ್‌’ ಮನೋರಂಜನೆ ನೀಡಿದ ಕಿಚ್ಚ; ಸುದೀಪ್‌ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

Max Movie Collection

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeepa) ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಬಹು ನಿರೀಕ್ಷಿತ ʼಮ್ಯಾಕ್ಸ್‌ʼ ಚಿತ್ರ (Max Movie) ತೆರೆ ಕಂಡಿದೆ. ಕ್ರಿಸ್‌ಮಸ್‌ ಪ್ರಯುಕ್ತ ಡಿ. 25ರಂದು ರಿಲೀಸ್‌ ಅಗಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಕ್ಕಾ ಮಾಸ್‌ ಆಗಿ ಮೂಡಿ ಬಂದಿರುವ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹಾಗಾದರೆ ಈ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ವಿವರ (Max Movie Collection).

ಕಾಲಿವುಡ್‌ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ (Vijay Karthikeyaa) ʼಮ್ಯಾಕ್ಸ್‌ʼಗೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಸುದೀಪ್‌ ಮತ್ತೊಮ್ಮೆ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ ʼವಿಕ್ರಾಂತ್‌ ರೋಣʼ ಸಿನಿಮಾದ ಬಳಿಕ ಸುದೀಪ್‌ ಒಪ್ಪಿಕೊಂಡ ಚಿತ್ರವೇ ʼಮ್ಯಾಕ್ಸ್‌ʼ. ಈ ಹಿನ್ನೆಲೆಯಲ್ಲಿ ಚಿತ್ರ ಸೆಟ್ಟೇರಿದಾಗಿನಿಂದಲೂ ಕುತೂಹಲ ಗರಿಗೆದರಿತ್ತು. ಕಾರಣಾಂತರಗಳಿಂದ ತಡವಾಗುತ್ತ ಬಂದ ಚಿತ್ರ ಕೊನೆಗೂ ತೆರೆಕಂಡಿದ್ದು, ಅಭಿಮಾನಿಗಳು ಸೆಲೆಬ್ರೇಷನ್‌ ಮೂಡ್‌ನಲ್ಲಿದ್ದಾರೆ. ಎರಡೂ ಕೈ ಚಾಚಿ ಈ ಆ್ಯಕ್ಷನ್‌ ಡ್ರಾಮಾವನ್ನು ಮೆಚ್ಚಿಕೊಂಡಿದ್ದಾರೆ.

ಕಲೆಕ್ಷನ್‌ ಮಾಡಿದ್ದೆಷ್ಟು?

ʼಮ್ಯಾಕ್ಸ್‌ʼ ಸಿನಿಮಾ ರಿಲೀಸ್‌ ಆದ ಮೊದಲ ದಿನ ಸುಮಾರು 8.50 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯೊಂದು ತಿಳಿಸಿದೆ. ಆ ಮೂಲಕ ವರ್ಷಾಂತ್ಯದಲ್ಲಿ ಸ್ಯಾಂಡಲ್‌ವುಡ್‌ಗೆ ಬಹು ದೊಡ್ಡ ಗೆಲುವು ಸಿಕ್ಕಿದೆ. ಕ್ರಿಸ್‌ಮಸ್‌ ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ ಸರಣಿ ರಜೆ ಇದ್ದು, ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ. ಪಕ್ಕಾ ಮಾಸ್‌ ಶೈಲಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾವನ್ನು ನಿರ್ದೇಶಕರು ಕುತೂಹಲಭರಿತವಾಗಿ ಕಟ್ಟಿಕೊಟ್ಟ ರೀತಿ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಸಾಮಾನ್ಯ ಕಥೆಯಾದರೂ ವೇಗವಾಗಿ ಸಾಗುವ ಚಿತ್ರಕಥೆ, ಭರ್ಜರಿ ಮ್ಯೂಸಿಕ್‌, ಛಾಯಾಗ್ರಹಣ, ಕಿಚ್ಚ ಸುದೀಪ್‌ ಅವರ ಭರ್ಜರಿ ಸಾಹಸ ದೃಶ್ಯ, ನಟನೆ ಚಿತ್ರದ ಪ್ಲಸ್‌ ಪಾಯಿಂಟ್‌. ಮ್ಯಾಕ್ಸ್‌ʼ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಯಾಗಿದೆ.

ಒಂದೇ ದಿನ ನಡೆಯುವ ಕಥೆ

ವಿಶೇಷ ಎಂದರೆ ಪೊಲೀಸ್‌ ಸ್ಟೇಷನ್‌ನಲ್ಲಿ ಒಂದು ದಿನ ರಾತ್ರಿ ನಡೆಯುವ ಕಥೆಯೇ ʼಮ್ಯಾಕ್ಸ್‌ʼ. ಮರುದಿನ ಡ್ಯೂಟಿಗೆ ಹಾಜರಾಗಲು ಮುನ್ನಾ ದಿನ ರಾತ್ರಿಯೇ ಸ್ಟೇಷನ್‌ಗೆ ಆಗಮಿಸುವ ಮ್ಯಾಕ್ಸ್‌ (ಸುದೀಪ್‌) ಎದುರಿಸುವ ಸವಾಲು, ಅದನ್ನು ಆತ ಹೇಗೆ ಭುಜ ಮತ್ತು ಬುದ್ಧಿಯ ಬಲದಿಂದ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಒಂದೇ ದಿನ ನಡೆಯುವ ಕಥೆಯಾದರೂ ನಿರ್ದೇಶಕರು ಎಲ್ಲೂ ಬೋರ್‌ ಹೊಡೆಯದಂತೆ ಚಿತ್ರ ಕಟ್ಟಿರುವುದೇ ಇದರ ವಿಶೇಷತೆ.

ಸುದೀಪ್‌ ಜತೆಗೆ ತಮಿಳಿನ ವರಲಕ್ಷ್ಮೀ ಶರತ್‌ ಕುಮಾರ್‌, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ ಮತ್ತಿತರರು ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮೋಡಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Kiccha Sudeep: ಸುದೀಪ್‌ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್‌; ʼಮ್ಯಾಕ್ಸ್‌ʼ ಚಿತ್ರದ ಮಾಸ್‌ ಹಾಡು ಔಟ್‌