Sunday, 6th October 2024

Nagarjuna: ಕೊಂಡಾ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿದ ನಾಗಾರ್ಜುನ ಅಕ್ಕಿನೇನಿ

Nagarjuna

ಭಾರತ್ ರಕ್ಷಾ ಸಮಿತಿ (BRS) ಮುಖಂಡ ಕೆ.ಟಿ.ರಾಮರಾವ್ ಹಸ್ತಕ್ಷೇಪದಿಂದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ಸಂಬಂಧದಲ್ಲಿ ಬಿರುಕು ಉಂಟಾಗಿ ವಿಚ್ಛೇದನಕ್ಕೆ ಕಾರಣವಾಯಿತು ಎಂಬ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇದೀಗ ನಾಗಾರ್ಜುನ ಅವರು ಕೊಂಡ ಸುರೇಖಾ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಎಂಬ ಒತ್ತಡವಿತ್ತು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಕೆಟಿಆರ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಂತರ ಕ್ಷಮೆಯಾಗಿಚಿಸಿದ್ದರು. ಇದೀಗ ಅಕ್ಕಿನೇನಿ ಕುಟುಂಬ ಇವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ತೆಲಂಗಾಣ ರಾಜ್ಯ ಸಚಿವೆ ಕೊಂಡಾ ಸುರೇಖಾ ಅವರು, ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್​ ಪ್ರಭು ಅವರ ವಿಚ್ಛೇದನಕ್ಕೆ ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್​(ಕೆಟಿಆರ್​) ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಆರ್​ಎಸ್​​​​ ನಾಯಕನ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಕೆಟಿಆರ್​ ಒಬ್ಬ ಮಾದಕ ದ್ರವ್ಯಗಳ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್​​ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ತಾನು ಡ್ರಗ್ಸ್​ ತೆಗೆದುಕೊಳ್ಳುವುದಲ್ಲದೇ, ಚಿತ್ರರಂಗದ ನಾಯಕಿಯರಿಗೂ ಈ ಚಟವನ್ನು ಕಲಿಸಿದ್ದಾರೆ ಎಂದು ಹೇಳಿದ್ದರು.

ನಾಗಾರ್ಜುನ ಒಡೆತನದ ಎನ್​​- ಕನ್ವೆನ್ಷನ್​​ ಸೆಂಟರ್​​ ಬೇಡ ಎಂಬುದಾದರೆ ತನ್ನ ಬಳಿಗೆ ಅವರನ್ನು ಕಳುಹಿಸುವಂತೆ ಮಾಜಿ ಸಚಿವ ಕೆಟಿಆರ್​ ನಟ ನಾಗಾರ್ಜುನ ಬಳಿ ಬೇಡಿಕೆ ಇಟ್ಟಿದ್ದ. ಅವರ ಬಳಿ ಹೋಗುವಂತೆ ನಟಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ವಿರೋಧಿಸಿದ್ದರು. ಇದೇ ವಿಚಾರಕ್ಕಾಗಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದರು ಎಂದು ವಿವಾದಿತ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ ನಟ ನಾಗಾರ್ಜುನ ಸಚಿವೆ ನೀಡಿರುವ ಹೇಳಿಕೆಗಳು ಸುಳ್ಳು, ಅಸಂಬದ್ಧವಾಗಿವೆ. ತಕ್ಷಣವೇ ಅವರು ನೀಡಿದ ಹೇಳಿಕೆಗಳನ್ನು ವಾಪಸ್​ ಪಡೆಯಬೇಕು ಎಂದು ಒತ್ತಾಯಿಸಿದ್ದರು. ನಾಗ ಚೈತನ್ಯ ಕೂಡ ಪ್ರತಿಕ್ರಿಯಿಸಿದ್ದರು. ವಿಚ್ಛೇದನದ ನಿರ್ಧಾರವು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಜೀವನ ನಿರ್ಧಾರಗಳಲ್ಲಿ ಒಂದಾಗಿದೆ. ಬಹಳಷ್ಟು ಯೋಚಿಸಿದ ನಂತರ, ನಾನು ಮತ್ತು ನನ್ನ ಮಾಜಿ ಸಂಗಾತಿಯು ಬೇರೆಯಾಗಲು ಪರಸ್ಪರ ನಿರ್ಧಾರವನ್ನು ತೆಗೆದುಕೊಂಡೆವು ಎಂದಿದ್ದರು.

ಬಳಿಕ ನಾಗಾರ್ಜುನ ಅವರು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ನಟ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Konda Surekha: ಕ್ಷಮೆಯಾಚಿಸಿದರೂ ಸಚಿವೆ ಕೊಂಡಾ ಸುರೇಖಾಗೆ ಕಾನೂನು ಸಂಕಷ್ಟ; ಕೋರ್ಟ್‌ ಮೆಟ್ಟಿಲೇರಿದ ನಾಗಾರ್ಜುನ ಅಕ್ಕಿನೇನಿ