ಬೆಂಗಳೂರು: ಸುರಮ್ ಮೂವೀಸ್ ನಿರ್ಮಾಣದ ಯುವ ನಟ ಪ್ರವೀರ್ ಶೆಟ್ಟಿ (Praveer Shetty) ನಾಯಕನಾಗಿ ನಟಿಸಿರುವ ʼನಿದ್ರಾದೇವಿ Next Doorʼ (Nidradevi Next Door) ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ರಾಜರಾಜೇಶ್ವರಿ ನಗರದಲ್ಲಿ ಕೊನೆಯ ಹಂತದ ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು. ಈ ವೇಳೆ ಚಿತ್ರದ ಎಲ್ಲ ಕಲಾವಿದರು, ತಂತ್ರಜ್ಞಾನರು ಹಾಗೂ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಭಾಗಿಯಾಗಿದ್ದರು.
ಚಿತ್ರದಲ್ಲಿ ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಧಾರಾಣಿ, ಶ್ರೀವತ್ಸ, ಐಶ್ವರ್ಯ ಗೌಡ , ಅನೂಪ್, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ಈ ಚಿತ್ರವನ್ನು ನಿರ್ಮಾಪಕ ಜಯರಾಮ್ ದೇವಸಮುದ್ರ ತಮ್ಮ ಸುರಮ್ ಮೂವೀಸ್ ಬ್ಯಾನರ್‌ನಡಿ ನಿರ್ಮಿಸಿದ್ದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ʼರೇವ್ ಪಾರ್ಟಿʼ ಮತ್ತು ʼಎಂಗೇಜ್‌ಮೆಂಟ್ʼ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ʼನಿದ್ರಾದೇವಿ Next Doorʼ ಚಿತ್ರವೂ ಅವರ ಬ್ಯಾನರ್‌ನಲ್ಲಿ ಬರುತ್ತಿರುವ ವಿಭಿನ್ನ ಚಿತ್ರವಾಗಿದ್ದು, ಅಂದುಕೊಂಡಂತೆ ಎಲ್ಲ ಶೆಡ್ಯೂಲ್ ಅದ್ಭುತವಾಗಿ ಮೂಡಿ ಬಂದಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಸುರಾಗ್ ಸಾಗರ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. ಬೆಂಗಳೂರಿನ ಎಚ್‌ಎಂಟಿಯಲ್ಲಿ ಒಂದು ಪ್ರತ್ಯೇಕ ಸೆಟ್ ಹಾಕಿ ಅದರಲ್ಲಿ ಚಿತ್ರದ ಒಂದು ಮುಖ್ಯ ಭಾಗವನ್ನು ಶೂಟ್ ಮಾಡಿದ್ದು ಅದ್ಭುತವಾಗಿ ಈ ಚಿತ್ರಕ್ಕೆ ಮೂಡಿ ಬಂದಿದೆ ಎಂದು ತಿಳಿಸಿದ್ದಾರೆ.
ಚಿತ್ರ ತಂಡ ಇದೇ ವರ್ಷ ಮಾರ್ಚ್‌ನಲ್ಲಿ ಈ ವಿಭಿನ್ನ ಟೈಟಲ್‌ನೊಂದಿಗೆ ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಸಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದರು. ಚಿತ್ರಕ್ಕೆ ಕ್ಲಾಪ್ ಮಾಡಿದ ಕನಸುಗಾರ ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ಈ ಚಿತ್ರಕ್ಕೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ (ʼಯುವʼ ಸಿನಿಮಾ ಖ್ಯಾತಿ) ಮತ್ತು ಹೇಮಂತ್ ಕುಮಾರ್ ಡಿ. ಅವರ ಸಂಕಲನವಿದೆ.
ಕಥೆ ಏನು?
ಶೀರ್ಷಿಕೆಯೇ ಹೇಳುವಂತೆ ಚಿತ್ರದ ಕಥೆ ನಿದ್ದೆಯ ಸುತ್ತವೇ ಸುತ್ತುತ್ತದೆ. ನಿದ್ದೆ ಬಾರದ ಇಬ್ಬರ ಕಥೆಯನ್ನಿಟ್ಟುಕೊಂಡು ಕಥೆ ಹೆಣೆಯಾಗಿದೆ. ʼʼಇಲ್ಲಿ ಇಬ್ಬರು ಯುವಕರಿದ್ದಾರೆ. ಅವರಿಬ್ಬರಿಗೂ ನಿದ್ದೆ ಬರುತ್ತಿಲ್ಲ. ನಾಯಕಿ ಪಾತ್ರ ಅವರಿಬ್ಬರನ್ನೂ ಕನೆಕ್ಟ್ ಮಾಡುತ್ತದೆ. ನಾಯಕಿ ಯಾರು ಮತ್ತು ಆಕೆ ಹೇಗೆ ಅವರಿಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎನ್ನುವುದೇ ಚಿತ್ರದ ಕಥೆʼʼ ಎನ್ನುತ್ತಾರೆ ನಿರ್ದೇಶಕ ಸುರಾಗ್ ಸಾಗರ್.
ಈ ಸುದ್ದಿಯನ್ನೂ ಓದಿ: ಮಾಯಾಬಜಾರ್‌ನಿಂದ ರಾಕೆಟ್‌ರಿ ವರೆಗೆ: ಜಿಯೋ ಸಿನಿಮಾದಲ್ಲಿದೆ IMDbನಲ್ಲಿ ಟಾಪ್ ರೇಟಿಂಗ್ ಪಡೆದ ಸಿನಿಮಾಗಳು