Tuesday, 7th January 2025

Prajwal Devaraj: ‘ರಾಕ್ಷಸ’ ಅವತಾರದಲ್ಲಿ ಪ್ರಜ್ವಲ್‌ ದೇವರಾಜ್‌; ಈ ಬಹು ನಿರೀಕ್ಷಿತ ಚಿತ್ರ ಶಿವರಾತ್ರಿಯಂದು ರಿಲೀಸ್‌

Prajwal Devaraj

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಸದ್ಯ ಸ್ಯಾಂಡಲ್‌ವುಡ್‌ನ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಅವರು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಪೈಕಿ ಬಹು ನಿರೀಕ್ಷಿತ ಸಿನಿಮಾ ʼರಾಕ್ಷಸʼ (Rakshasa). ಚಿತ್ರದ ಟೈಟಲ್ ಕೇಳಿದ್ ತಕ್ಷಣ ಇದು ಬರೀ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ರಾಕ್ಷಸನಿಗೆ ಭಾವನಾತ್ಮಕ ಕಥೆಯ ಜತೆಗೆ ಟೈಮ್‌ ಲೂಪ್‌ ಕಾನ್ಸೆಪ್ಟ್‌ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಲೋಹಿತ್. ʼಮಮ್ಮಿʼ, ʼದೇವಕಿʼ ಚಿತ್ರಗಳ ಖ್ಯಾತಿಯ ಲೋಹಿತ್ ಸಾರಥ್ಯದ ʼರಾಕ್ಷಸʼ ಸಿನಿಮಾವೀಗ ತೆರೆಗೆ ಬರಲು ರೆಡಿಯಾಗಿದೆ.

ಶಿವರಾತ್ರಿಗೆ ʼರಾಕ್ಷಸʼ ರಿಲೀಸ್

ʼರಾಕ್ಷಸʼ ಸಿನಿಮಾ ಶಿವರಾತ್ರಿಯಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪ್ರಜ್ವಲ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ʼರಾಕ್ಷಸʼ ಸಿನಿಮಾದ ಶೇ. 80ರಷ್ಟು ಶೂಟಿಂಗ್ ರಾಮೋಜಿ ಫಿಲ್ಮಂ ಸಿಟಿಯಲ್ಲಿ ನಡೆದಿರುವುದು ವಿಶೇಷ. ರಾಮೇಶ್ವರಂ, ಗೋವಾ, ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಲಾಗಿದೆ.

ಶಾನ್ವಿ ಎಂಟರ್‌ಟೈನ್‌ಮೆಂಟ್‌ನಡಿ ದೀಪು ಬಿ.ಎಸ್. ನಿರ್ಮಾಣ ಮಾಡುತ್ತಿದ್ದು, ನವೀನ್ ಹಾಗೂ ಮಾನಸ ಕೆ. ಸಹ ನಿರ್ಮಾಣ ಮಾಡಿದ್ದಾರೆ. ಜೇಬಿನ್ ಪಿ. ಜೋಕಬ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ವರುಣ್ ಉಣ್ಣಿ ಸಂಗೀತ ನಿರ್ದೇಶಕ, ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ, ರವಿಚಂದ್ರನ್ ಸಿ. ಸಂಕಲನ ʼರಾಕ್ಷಸʼ ಸಿನಿಮಾಕ್ಕಿದೆ. ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಜ್ವಲ್‌, ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ‘ರಾಕ್ಷಸ’ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ.

ಗಮನ ಸೆಳೆದ ‘ಕರಾವಳಿ’ ಟೀಸರ್

ಇತ್ತೀಚೆಗೆ ರಿಲೀಸ್‌ ಆಗಿರುವ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ (Karavali) ಚಿತ್ರ ಟೀಸರ್‌ ಗಮನ ಸೆಳೆಯುತ್ತಿದೆ. 2025ರ ಬಹುನಿರೀಕ್ಷೆಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ʼಕರಾವಳಿʼ ಕೂಡ ಜಾಗ ಗಿಟ್ಟಿಸಿಕೊಂಡಿರುವುದು ವಿಶೇಷ. ಗುರುದತ್ ಗಾಣಿಗ ನಿರ್ದೇಶನದ ʼಕರಾವಳಿʼಯ ಈ ವಿಭಿನ್ನವಾದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಕರಾವಳಿ ಈಗಾಗಲೇ 80ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ.

ಈ ಸುದ್ದಿಯನ್ನೂ ಓದಿ: Karavali Teaser: ಮೈ ಜುಮ್ ಎನ್ನುವಂತಿದೆ ‘ಕರಾವಳಿ’ ಟೀಸರ್: ‘ಪ್ರತಿಷ್ಠೆಯ ಪಿಚಾಚಿ’ಗೆ ಫ್ಯಾನ್ಸ್ ಫುಲ್ ಫಿದಾ

Leave a Reply

Your email address will not be published. Required fields are marked *