ಬೆಂಗಳೂರು: ಪ್ರತಿ ಸಿನಿಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಇದೀಗ ʼರಾಕ್ಷಸʼ (Rakshasa) ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ ಅವರು ವಿವಿಧ ಗೆಟಪ್ ಧರಿಸಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ತೆರೆಗೆ ಬರುತ್ತಿರುವ ʼರಾಕ್ಷಸʼ ಸಿನಿಮಾದಿಂದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ತೆಲುಗಿನಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಚಿತ್ರದ ಥಿಯೇಟರ್ ಹಕ್ಕನ್ನು ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತನ್ನದಾಗಿಸಿಕೊಂಡಿದೆ. ಅಖಂಡ ತೆಲುಗು ಪ್ರೇಕ್ಷಕರಿಗೆ ʼರಾಕ್ಷಸʼ ಸಿನಿಮಾವನ್ನು ಈ ಸಂಸ್ಥೆ ತಲುಪಿಸಲಿದೆ.
ಸಂತಸದಲ್ಲಿ ನಿರ್ಮಾಪಕರು
“ಕನ್ನಡ ಸಿನಿಮಾಗಳ ಮಾರುಕಟ್ಟೆ ಸೀಮಿತವಾಗಿದೆ. ಹೀಗಿದ್ದರೂ ಈಗಾಗಲೇ ಕನ್ನಡ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ಈಗ ಬರೀ ಟೀಸರ್, ಟ್ರೈಲರ್, ಕಂಟೆಂಟ್ ನೋಡಿಯೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಒಳ್ಳೆ ಮೊತ್ತಕ್ಕೆ ಹಕ್ಕನ್ನು ತಮ್ಮದಾಗಿಸಿಕೊಂಡಿದೆ. ಹಲವು ಹೊಸತನಗಳನ್ನು ಹೊಂದಿರುವ ಈ ಸಿನಿಮಾ ಮೇಲೆ ಭರವಸೆಯಿಟ್ಟೇ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ” ಎಂದು ನಿರ್ಮಾಪಕ ದೀಪು ಬಿ.ಎಸ್. ಖುಷಿ ಹಂಚಿಕೊಂಡಿದ್ದಾರೆ. ಕನ್ನಡದ ಥಿಯೇಟರ್ ಹಕ್ಕು ಹಾಗೂ ಆಡಿಯೋ ಹಕ್ಕು ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದ್ದು, ಇಡೀ ʼರಾಕ್ಷಸʼ ಚಿತ್ರತಂಡ ಖುಷಿಗೊಂಡಿದೆ.
ವಿಭಿನ್ನ ಚಿತ್ರ
ʼರಾಕ್ಷಸʼ ವಿಶೇಷ ಸಿನಿಮಾ. ಯಾಕೆಂದರೆ ಇದರಲ್ಲಿ ಟೈಮ್ ಲೂಪ್ ಕಾನ್ಸೆಪ್ಟ್ ಇದೆ. ಕನ್ನಡಕ್ಕೆ ಈ ರೀತಿಯ ಚಿತ್ರ ಬಹಳ ಅಪರೂಪ. ಪ್ರಿಯಾಂಕಾ ಉಪೇಂದ್ರ ನಟಿಸಿರುವ ʼಮಮ್ಮಿʼ, ʼದೇವಕಿʼ ಚಿತ್ರಗಳನ್ನ ನಿರ್ದೇಶಿಸಿರುವ ಲೋಹಿತ್ ʼರಾಕ್ಷಸʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪ್ರಜ್ವಲ್ ಅವರು ಭಿನ್ನ ಗೆಟಪ್ ತಾಳಿರುವ ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಅನುಭವಿ ಕಲಾವಿದರು ನಟಿಸಿದ್ದಾರೆ. ಚಿತ್ರದ ಶೇ. 80ರಷ್ಟು ಚಿತ್ರೀಕರಣವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಸಲಾಗಿದೆ. ಇನ್ನುಳಿದ ದೃಶ್ಯಗಳ ಶೂಟಿಂಗ್ ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನೆರವೇರಿದೆ.
‘ಶಾನ್ವಿ ಎಂಟರ್‌ಟೈನ್‌ಮೆಂಟ್’ ಮೂಲಕ ದೀಪು ಬಿ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜೇಬಿನ್ ಪಿ. ಜೋಕಬ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉಣ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಅವರ ಸಂಕಲನ ಈ ಚಿತ್ರಕ್ಕಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ‘ರಾಕ್ಷಸ’ ಸಿನಿಮಾ ರಿಲೀಸ್ ಆಗಲಿದೆ.
ಈ ಸುದ್ದಿಯನ್ನೂ ಓದಿ: Prajwal Devaraj: ‘ರಾಕ್ಷಸ’ ಅವತಾರದಲ್ಲಿ ಪ್ರಜ್ವಲ್ ದೇವರಾಜ್; ಈ ಬಹು ನಿರೀಕ್ಷಿತ ಚಿತ್ರ ಶಿವರಾತ್ರಿಯಂದು ರಿಲೀಸ್