ಮುಂಬೈ: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ ಅಭಿನಯದ ಬಹುನಿರೀಕ್ಷಿತ ಸೀಕ್ವೆಲ್ ಚಿತ್ರ ಪುಷ್ಪಾ 2 ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮುಂಬೈ ಮೆಟ್ರೋದ ಬೋಗಿಗಳು ಪುಷ್ಪಾ 2(Pushpa 2) ಚಿತ್ರದ ಪೋಸ್ಟ್ ಅಂಟಿಸಿಕೊಳ್ಳುವುದರ ಮೂಲಕ ಚಿತ್ರದ ಬಗ್ಗೆ ಉತ್ಸಾಹವನ್ನು ಹೆಚ್ಚಿಸಿವೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ನಗರದ ಮೆಟ್ರೋ ರೈಲು ಪುಷ್ಪಾ ಪೋಸ್ಟರ್ ಅಂಟಿಸಿಕೊಂಡು ತಿರುಗುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ. ಇಡೀ ರೈಲು ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಚಿತ್ರದ ಪೋಸ್ಟರ್‌ಗಳಿಂದ ತುಂಬಿತ್ತು.
ಈ ವೈರಲ್ ವಿಡಿಯೊದಲ್ಲಿ ಮುಂಬೈ ಮೆಟ್ರೋ ರೈಲಿನ ಹೊರ ಗೋಡೆಗಳ ಮೇಲೆ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಆದರೆ ರೈಲಿನ ಒಳಗೂ ಪೋಸ್ಟರ್ ಅನ್ನು ಅಂಟಿಸಲಾಗಿದೆಯೇ? ಇಲ್ಲವೇ? ಎಂಬುದು ಸ್ಪಷ್ಟವಾಗಿಲ್ಲ.
ಪುಷ್ಪರಾಜ್ ಅವರ ಸಹಿ ಹಿಡಿದು ಶ್ರೀವಲ್ಲಿ ಅವರ ಮ್ಯಾಚ್‌ಬಾಕ್ಸ್ ಭಂಗಿಯವರೆಗೆ, ಸಿನಿಮಾ ದೃಶ್ಯಗಳನ್ನು ರೈಲಿನ ಮೇಲೆ ಅಂಟಿಸಲಾಗಿದ್ದು, ಇದು ಸಿನಿಮಾ ಬಗ್ಗೆ ಪ್ರೇಕ್ಷಕರಿಗಿರುವ ಕ್ರೇಜ್ ಅನ್ನು ಹೆಚ್ಚಿಸಿವೆ. ಆದರೆ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಪುಷ್ಪಾ 2 ಚಲನಚಿತ್ರ ಪೋಸ್ಟರ್‌ಗಳಲ್ಲ. ಆದರೆ ಪುಷ್ಪಾ ಶೈಲಿಯಲ್ಲಿ ಯಾವುದೋ ಎಲೆಕ್ಟ್ರಾನಿಕ್ಸ್ ಬ್ರಾಂಡ್‍ನ ಜಾಹೀರಾತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿ; 34 ಪ್ರಯಾಣಿಕರಿಗೆ ಗಾಯ
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಮೈತ್ರಿ ಮೂವಿ ಮೇಕರ್ಸ್, “ಪುಷ್ಪಾ ಬ್ರ್ಯಾಂಡಿಂಗ್‍ನಿಂದ ಸುತ್ತಿದ ಮುಂಬೈ ಮೆಟ್ರೋ” ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗಾಗಲೇ 2.2 ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಸಾವಿರಾರು ಅಭಿಮಾನಿಗಳು ಲೈಕ್ ಬಟನ್ ಒತ್ತಿದರೆ, ಕೆಲವರು ಕಾಮೆಂಟ್ ವಿಭಾಗದಲ್ಲಿ ‘ಫೈರ್’ ಎಮೋಜಿಗಳನ್ನು ಹಾಕಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪ 2: ದಿ ರೂಲ್ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಲು ಚಿತ್ರಕ್ಕೆ ಸಂಬಂಧಿಸಿದ ಜಿಐಎಫ್‍ಗಳನ್ನು ಹಂಚಿಕೊಂಡಿದ್ದಾರೆ.