Tuesday, 24th December 2024

Pushpa 2 Collection: ‘ಪುಷ್ಪ 2’ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಶೇಕ್‌; 2 ದಿನಗಳಲ್ಲಿ ಬರೋಬ್ಬರಿ 417 ಕೋಟಿ ರೂ. ಬಾಚಿಕೊಂಡ ಅಲ್ಲು ಅರ್ಜುನ್‌ ಚಿತ್ರ

Pushpa 2 Collection

ಹೈದರಾಬಾದ್‌: ಡಿ. 5ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಂಡಿರುವ ಅಲ್ಲು ಅರ್ಜುನ್‌ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ 2’ (Pushpa 2) ಚಿತ್ರ ನಿರೀಕ್ಷೆಯಂತೆ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಕ್ಷರಶಃ ವೈಲ್ಡ್‌ ಫೈರ್‌ನಂತೆ ಹೊತ್ತಿ ಉರಿಯುತ್ತಿದೆ. ಇದರ ಅಬ್ಬರಕ್ಕೆ ದಾಖಲೆಗಳೆಲ್ಲ ಉಡೀಸ್‌ ಆಗಿವೆ. ತೆರೆಕಂಡ ಮೊದಲ ದಿನವೇ ದೇಶದಲ್ಲಿ 175 ಕೋಟಿ ರೂ. ಬಾಚಿಕೊಂಡ ಚಿತ್ರ 2ನೇ ದಿನಗಳಿದ್ದು 90.1 ಕೋಟಿ ರೂ. ಆ ಮೂಲಕ 2ನೇ ದಿನಗಳಲ್ಲಿ 265 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 2 ದಿನಗಳಲ್ಲಿ ಬರೋಬ್ಬರಿ ಒಟ್ಟು 417.5 ಕೋಟಿ ದೋಚಿದೆ. ಆ ಮೂಲಕ ಹಿಂದಿನ ರೆಕಾರ್ಡ್‌ಗಳನ್ನೆಲ್ಲ ಬ್ರೇಕ್‌ ಮಾಡಿದೆ ಎಂದು ವರದಿಯೊಂದು ತಿಳಿಸಿದೆ (Pushpa 2 Collection).

ವಿವಿಧ ಭಾಷೆಗಳಲ್ಲಿ ತೆರೆಕಂಡಿರುವ ʼಪುಷ್ಪ 2ʼ ತೆಲುಗು ವರ್ಷನ್‌ 2ನೇ ದಿನವಾದ ಶುಕ್ರವಾರ 27.1 ಕೋಟಿ ರೂ. ಗಳಿಸಿದರೆ ಹಿಂದಿಯಿಂದ 55 ಕೋಟಿ ರೂ. ಹರಿದು ಬಂದಿದೆ. ಇನ್ನು ತಮಿಳಿನಿಂದ 5.5 ಕೋಟಿ ರೂ., ಮಲಯಾಳಂನಿಂದ 1.9 ಕೋಟಿ ರೂ. ಮತ್ತು ಕನ್ನಡದಿಂದ 60 ಲಕ್ಷ ರೂ. ಹರಿದು ಬಂದಿದೆ. ವಿಶೇಷ ಎಂದರೆ ಒರಿಜಿನಲ್‌ ತೆಲುಗು ವರ್ಷನ್‌ಗಿಂತ ಹಿಂದಿ ಅವತರಣಿಕೆ ಹೆಚ್ಚು ಕಲೆಕ್ಷನ್‌ ಮಾಡಿದೆ. ತೆಲುಗಿನಲ್ಲಿ 118.05 ಕೋಟಿ ರೂ. ಗಳಿಸಿದರೆ, ಹಿಂದಿಯಲ್ಲಿ ಬಾಚಿಕೊಂಡಿದ್ದು 125.3 ಕೋಟಿ ರೂ.

2 ದಿನಗಳಲ್ಲಿ 417.5 ಕೋಟಿ ರೂ. ಗಳಿಕೆ

ಸಿನಿಮಾ ತಜ್ಞರ ಪ್ರಕಾರ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ʼಪುಷ್ಪ 2ʼ ಚಿತ್ರ 2 ದಿನಗಳಲ್ಲಿ 417.5 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಮೊದಲ ದಿನ 282.9 ಕೋಟಿ ರೂ. ಗಳಿಸಿದರೆ, 2ನೇ ದಿನವಾದ ಶುಕ್ರವಾರ 134.6 ಕೋಟಿ ರೂ. ಬಾಚಿಕೊಂಡಿದೆ. ಇದರೊಂದಿಗೆ 400 ಕೋಟಿ ರೂ. ಮೈಲಿಗಲ್ಲನ್ನು ದಾಟಿದೆ. ಈ ಮೂಲಕ ಮೊದಲ 2 ದಿನಗಳಲ್ಲಿ ವಿಶ್ವಾದ್ಯಂತ ಅತೀ ಹೆಚ್ಚು ಗಳಿಸಿದ ಭಾರತದ ಸಿನಿಮಾ ಎನಿಸಿಕೊಂಡಿದೆ.

ಸುಕುಮಾರ್‌ ನಿರ್ದೇಶನದ ಈ ಚಿತ್ರ 2021ರಲ್ಲಿ ರಿಲೀಸ್‌ ಆದ ʼಪುಷ್ಪʼ ಚಿತ್ರದ 2ನೇ ಭಾಗ. ʼಪುಷ್ಪʼ ವಿಶ್ವಾದ್ಯಂತ 393.50 ಕೋಟಿ ರೂ. ಗಳಿಸಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ಗರಿಯನ್ನು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿಯೂ ಬಹುತೇಕ ಅದೇ ಕಲಾವಿದರು ಮುಂದುವರಿದಿದ್ದಾರೆ.

ಅಲ್ಲು ಅರ್ಜುನ್‌ಗೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿ ಸಿಗುತ್ತಾ?

ʼಪುಷ್ಪ 2ʼ ಚಿತ್ರದಲ್ಲಿನ ಅಲ್ಲು ಅರ್ಜುನ್‌ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅದರಲ್ಲಿಯೂ ಗಂಗಮ್ಮನ ಜಾತ್ರೆ ದೃಶ್ಯಕ್ಕೆ ಬರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್‌ 2ನೇ ಬಾರಿ ರಾಷ್ಟ್ರ ಪ್ರಶಸ್ತಿ ಪಡೆಯಲಿದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Movie: ಹಿಂದಿ ಬಾಕ್ಸ್‌ ಆಫೀಸ್‌ನಲ್ಲೂ ವೈಲ್ಡ್‌ ಫೈರ್‌ನಂತೆ ಉರಿದ ‘ಪುಷ್ಪ 2’; ‘ಕೆಜಿಎಫ್‌ 2’ ದಾಖಲೆ ಉಡೀಸ್‌