ಹೈದರಾಬಾದ್: ಡಿ. 5ರಂದು ವಿಶ್ವಾದ್ಯಂತ ತೆರೆಕಂಡ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ 2’ ಚಿತ್ರ ಹೊಸ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಈ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಇದೀಗ ಮತ್ತೊಂದು ಮೈಲಿಗಲ್ಲು ತಲುಪಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಈ ಮೂಲಕ ಹಿಂದಿನ ದಾಖಲೆಗಳೆಲ್ಲ ಹೇಳ ಹೆಸರಿಲ್ಲದಂತೆ ನುಚ್ಚು ನೂರಾಗಿದೆ. ಜತೆಗೆ ದಕ್ಷಿಣ ಭಾರತದ ಚಿತ್ರ ಗಲ್ಲಾ ಪಟ್ಟಿಗೆಯಲ್ಲಿ ಹೊಸ ಭಾಷ್ಯ ಬರೆದಿದೆ (Pushpa 2 Collection).
ಟಾಲಿವುಡ್‌ನ ಕಮರ್ಷಿಯಲ್ ಚಿತ್ರಗಳ ನಿರ್ದೇಶಕ ಸುಕುಮಾರ್ (Sukumar) ಆ್ಯಕ್ಷನ್ ಕಟ್ ಹೇಳಿರುವ ‘ಪುಷ್ಪ 2’ 2021ರಲ್ಲಿ ತೆರೆಕಂಡು ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ತಂಡುಕೊಟ್ಟ ‘ಪುಷ್ಪ’ ಸಿನಿಮಾದ ಸೀಕ್ವೆಲ್. ಅಲ್ಲಿನ ಬಹುತೇಕ ಕಲಾವಿದರು 2ನೇ ಭಾಗದಲ್ಲಿಯೂ ಮುಂದುವರಿದಿದ್ದಾರೆ. ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನೊಳಗೊಂಡ ಇದು ಪಕ್ಕಾ ಮಾಸ್ ಚಿತ್ರವಾಗಿ ಮೂಡಿ ಬಂದಿದೆ. ವಿಶೇಷ ಎಂದರೆ ಪಕ್ಕಾ ಸೌತ್ ಫ್ಲೇವರ್ ಹೊಂದಿದ ಈ ಸಿನಿಮಾವನ್ನು ಬಾಲಿವುಡ್ ಚಿತ್ರ ಪ್ರೇಕ್ಷಕರೂ ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ.
ಕಲೆಕ್ಷನ್ ಎಷ್ಟಾಯ್ತು?
ʼಪುಷ್ಪ 2ʼ ರಿಲೀಸ್ ಆಗಿ ಈಗಾಗಲೇ 1 ತಿಂಗಳು ಕಳೆದಿದೆ. ಅಷ್ಟಾದರೂ ಅಬ್ಬರ ಕಡಿಮೆಯಾಗುತ್ತಲೇ ಇಲ್ಲ. ಜಾಗತಿಕವಾಗಿ ಒಟ್ಟು 1,831 ಕೋಟಿ ರೂ. ಕಲೆ ಹಾಕಿದ ಈ ಚಿತ್ರ ಭಾರತವೊಂದರಲ್ಲೇ 1,438 ಕೋಟಿ ರೂ. ಗಳಿಸಿದೆ. ಆ ಮೂಲಕ ಇದುವರೆಗೆ ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಖ್ಯಾತಿ ಪಡೆದುಕೊಂಡಿದ್ದ ಎಸ್.ಎಸ್.ರಾಜಮೌಳಿ-ಪ್ರಭಾಸ್-ಅನುಷ್ಕಾ ಶೆಟ್ಟಿ ಕಾಂಬಿನೇಷನ್ ʼಬಾಹುಬಲಿ 2ʼ ದಾಖಲೆಯನ್ನು ಅಳಿಸಿದೆ.
ʼಪುಷ್ಪ 2ʼ ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ 32 ದಿನಗಳ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ʼʼಪುಷ್ಪ 2ʼ ಇದೀಗ ಭಾರತೀಯ ಸಿನಿಮಾದ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಆ ಮೂಲಕ ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರವಾಗಿ ಹೊರ ಹೊಮ್ಮಿದೆ. ವೈಲ್ಡ್‌ಫೈರ್ ಬ್ಲಾಕ್‌ಬ್ಲಸ್ಟರ್ ಸಿನಿಮಾ 32 ದಿನಗಳಲ್ಲಿ ಜಾಗತಿಕವಾಗಿ 1,831 ಕೋಟಿ ರೂ. ಗಳಿಸಿದೆʼʼ ಎಂದು ಬರೆದುಕೊಂಡಿದೆ.
ಬಾಲಿವುಡ್‌ನ ʼದಂಗಲ್ʼ ದಾಖಲೆಯನ್ನೂ ಹಿಂದಿಕ್ಕಿದ ʼಪುಷ್ಪ 2ʼ
ʼಪುಷ್ಪ 2ʼ ರಿಲೀಸ್ ಆಗಿ 32 ದಿನಗಳಲ್ಲಿ ಭಾರತದಲ್ಲಿ 1,438 ಕೋಟಿ ರೂ. ಗಳಿಸಿದರೆ 8 ವರ್ಷಗಳ ಹಿಂದೆ ಅಂದರೆ 2017ರಲ್ಲಿ ಬಿಡುಗಡೆಯಾದ ʼಬಾಹುಬಲಿ 2ʼ ಭಾರತದಲ್ಲಿ ಒಟ್ಟು 1,416.9 ಕೋಟಿ ರೂ. ಸಂಗ್ರಹಿಸಿತ್ತು. ಜಾಗತಿಕವಾಗಿ 2,000 ಕೋಟಿ ರೂ.ಗಿಂತ ಅಧಿಕ ದೋಚಿರುವ ಆಮೀರ್ ಖಾನ್ ನಟನೆಯ ಬಾಲಿವುಡ್ ಚಿತ್ರ ʼದಂಗಲ್ʼ ಭಾರತದಲ್ಲಿ ಗಳಿಸಿದ್ದು, 535 ಕೋಟಿ ರೂ. ಹೀಗಾಗಿ ಇದೀಗ ʼಪುಷ್ಪ 2ʼ ಇವೆಲ್ಲವನ್ನೂ ಮೀರಿ ಮುನ್ನುಗ್ಗುತ್ತಿದೆ. ಅದಾಗ್ಯೂ ಒಟ್ಟಾರೆಯಾಗಿ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಖ್ಯಾತಿ ʼದಂಗಲ್ʼ ಹೆಸರಿನಲ್ಲಿದ್ದು, ಪುಷ್ಪರಾಜ್‌ನ ಓಟ ಗಮನಿಸಿದರೆ ಅದನ್ನೂ ಹಿಮ್ಮೆಟ್ಟುವ ಸಾಧ್ಯತೆ ದಟ್ಟವಾಗಿದೆ ಎಂದು ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ. ತೆಲುಗಿನ ಜತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಳಿಯಲ್ಲಿಯೂ ʼಪುಷ್ಪ 2ʼ ತೆರೆಕಂಡಿದೆ. ಈ ಪೈಕಿ ಅತೀ ಹೆಚ್ಚಿನ ಕಲೆಕ್ಷನ್ ಹಿಂದಿಯಿಂದಲೇ ಹರಿದು ಬಂದಿದೆ. ವಿಶೇಷ ಎದರೆ ಒರಿಜಿನಲ್ ತೆಲುಗಿಗಿಂತ ಹಿಂದಿ ವರ್ಷನ್ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ.
ಈ ಸುದ್ದಿಯನ್ನೂ ಓದಿ: Allu Arjun: ‘ಪುಷ್ಪ 2’ ಯಶಸ್ಸಿನ ಬೆನ್ನಲ್ಲೇ ಅಲ್ಲು ಅರ್ಜುನ್ ಮತ್ತೆ ಬ್ಯುಸಿ; 4ನೇ ಬಾರಿ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾದಲ್ಲಿ ನಟನೆ