ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯವಾಗಿ ಬದಲಾಗಿರುವುದು ಗೊತ್ತೇ ಇದೆ. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯ ಆಗಮನ ಮಾಡಿಬಿಟ್ಟರು. ಸದ್ಯ ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಯುವರಾಣಿ ಆಗಿ ಮೋಕ್ಷಿತಾ ಪೈ ಎಂಟ್ರಿಕೊಟ್ಟ ಬಳಿಕ ಮನೆ ಎರಡು ಬಣವಾಗಿದೆ.
ಮಂಜು ರಾಜರ ಬಣದಲ್ಲಿ ತ್ರಿವಿಕ್ರಮ್, ಗೌತಮಿ, ಧನರಾಜ್ ಆಚಾರ್, ಭವ್ಯಾ ಗೌಡ ಹಾಗೂ ಗೋಲ್ಡ್ ಸುರೇಶ್ ಇದ್ದರೆ ಅತ್ತ ಮೋಕ್ಷಿತಾ ಬಣದಲ್ಲಿ ಹನುಮಂತ, ಶಿಶಿರ್, ಶೋಭಾ ಶೆಟ್ಟಿ, ಐಶ್ವರ್ಯಾ, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಇದ್ದಾರೆ. ಈ ಎರಡು ಬಣಗಳಿಗೆ ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಇದರಲ್ಲಿ ಅತಿ ಹೆಚ್ಚು ಟಾಸ್ಕ್ ಗೆದ್ದ ಬಣ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ.
ಆದರೀಗ ಈ ವಿಚಾರದಲ್ಲಿ ಬಿಗ್ ಬಾಸ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಮಹಾರಾಜ ಮಂಜಣ್ಣ ಮತ್ತು ಯುವರಾಣಿ ಮೋಕ್ಷಿತಾ ಅವರಿಗೆ ವಿಶೇಷ ಅಧಿಕಾರವನ್ನ ನೀಡಿದ್ದಾರೆ. ಒಬ್ಬ ಪ್ರಜೆಯನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಬೇಕು ಎಂದು ಹೇಳಿದ್ದಾರೆ. ಜೊತೆಗೆ ಇದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಕೂಡ ಹೇಳಿದ್ದಾರೆ.
ಯುವರಾಣಿ ಪಟ್ಟದಲ್ಲಿರುವ ಮೋಕ್ಷಿತಾ ಅವರು ಈ ವಾರದ ಕ್ಯಾಪ್ಟನ್ಸಿ ಓಟದಿಂದ ತ್ರಿವಿಕ್ರಮ್ ಅವರನ್ನ ಹೊರ ಹಾಕಿದ್ದಾರೆ. ಇಲ್ಲಿಂದ ಅಲ್ಲಿ ಅಲ್ಲಿಂದ ಇಲ್ಲಿಗೆ ಹೇಳುವಂತಹ ಬುದ್ಧಿ ತ್ರಿವಿಕ್ರಮ್ ಅವರಿಗೆ ಇದೆ ಎಂಬ ಕಾರಣ ನೀಡಿದ್ದಾರೆ. ಆದರೆ, ಮೋಕ್ಷಿತಾ ಅವರ ಮಾತಿಗೆ ಥೂ.. ಇಂತಹ ಗೋಸುಂಬೆ ಆಟ ಆಡೋದಿದ್ದರೆ ನಾವು ಇನ್ನೊಂದು ಆಟ ಆಡುತ್ತಾ ಇದ್ದೆವು ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಅತ್ತ ಮಂಜಣ್ಣ ಅವರು ರಜತ್ ಹೆಸರನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಿದ್ದಾರೆ. ರಜತ್ ಅವರಿಗೆ ಸರಿ ಸಮಾನವಾಗಿ ಆಟ ಆಡುವವರು ಯಾರು ಇಲ್ಲ. ನಾವೆಲ್ಲರೂ ಚಿಕ್ಕವರೇ ಎಂದು ಕಾಣುವಂತಹ ಮನೋಭಾವನೆ ಅವರಲ್ಲಿದೆ. ಹೀಗಾಗಿ ಕ್ಯಾಪ್ಟನ್ಸಿ ಓಟದಿಂದ ರಜತ್ ಅವರನ್ನು ಹೊರಹಾಕುತ್ತೇನೆ ಎಂದಿದ್ದಾರೆ. ಈ ಮೂಲಕ ಇಬ್ಬರು ಬಲಿಷ್ಠ ಸ್ಪರ್ಧಿಗಳೇ ಮುಂದಿನ ವಾರದ ಕ್ಯಾಪ್ಟನ್ಸಿ ಓಟದಿಂದ ಔಟ್ ಆಗಿದ್ದಾರೆ.