Thursday, 12th December 2024

ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್‌ ಕ್ರಶ್ ’ರಶ್ಮಿಕಾ’

ಬೆಂಗಳೂರು : ಕರ್ನಾಟಕ ಮಾತ್ರವಲ್ಲದೇ, ಇತರ ದಕ್ಷಿಣ ಭಾರತದ ಇತರ ಭಾಷೆಗಳ ಸಿನೆಮಾಗಳಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ’ತಮಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ಸಮಯ ಇಲ್ಲ’ ಎನ್ನುವ ಮೂಲಕ ಕನ್ನಡಿಗರ ಹಾಗೂ ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ, ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್​ ಹೊಂದಿಸಲು ಕಷ್ಟ ಆಗುತ್ತಿದೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದೇನೆ. ಇದರ ನಡುವೆ ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರಂತೆ.

ಕನ್ನಡದ ಚಿತ್ರ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ನಂತರದ ದಿನಗಳಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ಪರಭಾಷೆ ಸಿನಿಮಾಗಳಲ್ಲಿ ಬ್ಯಝಿಯಾದ ನಂತರ ಕನ್ನಡ ಸಿನಿಮಾ ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು.

ಮಂದಣ್ಣ ಕೊನೆಯದಾಗಿ ನಟಿಸಿದ್ದ ಕನ್ನಡದ ಸಿನಿಮಾ ‘ಪೊಗರು’. ಇದಕ್ಕೂ ಮೊದಲು ಯಜಮಾನ,ಅಂಜನಿ ಪುತ್ರ ಹಾಗೂ ಕಿರಿಕ್ ಪಾರ್ಟಿಗಳಲ್ಲಿ ನಟಿಸಿದ್ದರು. ಸದ್ಯಕ್ಕೆ ಅವರು ಕನ್ನಡದ ಯಾವ ಚಿತ್ರದಲ್ಲಿಯೂ ನಟಿಸುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪ್ರಶ್ನೆಗೆ ಅವರು ‘ಸಮಯ ಇಲ್ಲ’ ಎನ್ನುವ ಉತ್ತರ ನೀಡಿದ್ದಾರೆ.