Thursday, 12th December 2024

Salman Khan: ಬಾಬಾ ಸಿದ್ದಿಕಿ ಹತ್ಯೆ; ಬಿಗ್‌ ಬಾಸ್‌ ಶೂಟಿಂಗ್‌ ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್‌

Salman Khan

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖಂಡ ಬಾಬಾ ಸಿದ್ದಿಕಿ (Baba Siddique) ಅವರನ್ನು ಶನಿವಾರ ಮುಂಬೈನಲ್ಲಿ ಹತ್ಯೆ ಮಾಡಲಾಗಿದೆ. ಬಾಂದ್ರಾ ಪೂರ್ವದಲ್ಲಿ ಅವರು ತಮ್ಮ ಕಾರಿನೊಳಗೆ ಕುಳಿತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಲೇ ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ (Salman Khan) ತಮ್ಮ ಬಿಗ್ ಬಾಸ್ 18 (Bigg Boss 18)ರ ಚಿತ್ರೀಕರಣವನ್ನು ಹಠಾತ್ತನೆ ರದ್ದುಗೊಳಿಸಿ, ಸಿದ್ದಿಕ್ಕಿ ಅವರನ್ನು ದಾಖಲಿಸಿದ ಮುಂಬೈಯ ಲೀಲಾವತಿ ಆಸ್ಪತ್ರೆಗೆ ಧಾವಿಸಿದರು. ಗಾಯಗೊಂಡ ಬಾಬಾ ಸಿದ್ದಿಕಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

65 ವರ್ಷದ ಸಿದ್ದಿಕಿ ಮಹಾರಾಷ್ಟ್ರದ ಪ್ರಮುಖ ಮುಸ್ಲಿಂ ರಾಜಕೀಯ ನಾಯಕರಾಗಿದ್ದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕೀಯಕ್ಕಿಂತ ಹೆಚ್ಚಾಗಿ, ಸಿದ್ದಿಕಿ ತಮ್ಮ ಸಾಮಾಜಿಕ ವರ್ಚಸ್ಸಿಗೆ ಹೆಸರುವಾಸಿಯಾಗಿದ್ದರು.

ಸಿದ್ದೀಕ್ ಅವರನ್ನು ಅವರ ಕಚೇರಿಯ ಬಳಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಎನ್‌ಸಿಪಿ ನಾಯಕನ ಕಚೇರಿಯ ಸಮೀಪವಿರುವ ರಾಮ ಮಂದಿರದ ಬಳಿ ರಾತ್ರಿ 9:15ರಿಂದ 9:20ರ ನಡುವೆ ಈ ಘಟನೆ ನಡೆದಿದೆ. ಸಿದ್ದೀಕ್ ಪಟಾಕಿ ಸಿಡಿಸುತ್ತಿದ್ದಾಗ, ಮೂವರು ದಾಳಿಕೋರರು ಮುಖಗಳನ್ನು ಕರವಸ್ತ್ರದಿಂದ ಮುಚ್ಚಿಕೊಂಡು ವಾಹನದಿಂದ ಹೊರಬಂದು ಯಾವುದೇ ಮುನ್ಸೂಚನೆಯಿಲ್ಲದೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಸಿದ್ದಿಕಿಯ ಎದೆಗೆ ಬಡಿದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು. ದಾಳಿಯಾದ ತಕ್ಷಣ ಅಲ್ಲಿದ್ದವರು ಸಿದ್ದೀಕ್ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.

ಬಾಬಾ ಸಿದ್ದಿಕಿ ಜತೆಗೆ ಸಲ್ಮಾನ್‌ ಖಾನ್‌ಗೆ ಇತ್ತು ಆತ್ಮೀಯ ನಂಟು

ಬಾಬಾ ಸಿದ್ದಿಕಿ ಅವರೊಂದಿಗೆ ಸಲ್ಮಾನ್‌ ಖಾನ್‌ ಆತ್ಮೀಯ ಸಂಬಂದ ಹೊಂದಿದ್ದರು. ಬಾಲಿವುಡ್‌ನ ತಾರೆಯರನ್ನು ಒಟ್ಟುಗೂಡಿಸಿ ಸಿದ್ದಿಕ್ ಅವರ ಪ್ರತಿವರ್ಷ ಇಫ್ತಾರ್ ಕೂಟ ನಡೆಸುತ್ತಾರೆ. ಈ ಕೂಟಗಳಿಗೆ ಸಲ್ಮಾನ್‌ ಖಾನ್‌ ನಿಯಮಿತ ಅತಿಥಿಯಾಗಿರುತ್ತಿದ್ದರು. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ಒಂದುಗೂಡಿಸಿದ ಖ್ಯಾತಿಯೂ ಇವರದ್ದು.

ಈ ಸುದ್ದಿಯನ್ನೂ ಓದಿ: Delhi Shootout: ರಾತ್ರೋರಾತ್ರಿ ಶೂಟೌಟ್‌; ಆಫ್ಘನ್‌ ಮೂಲದ ಜಿಮ್‌ ಓನರ್‌ ಬಲಿ- ಬಿಷ್ಣೋಯ್‌ ಗ್ಯಾಂಗ್‌ನಿಂದ ಕೃತ್ಯ

ಬಿಷ್ಣೋಯ್‌ ಗ್ಯಾಂಗ್‌ ಕೈವಾಡ?

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇನ್ನೂ ಕೊಲೆಯ ಹೊಣೆ ಹೊತ್ತುಕೊಂಡಿಲ್ಲ. ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಾಬರಮತಿ ಜೈಲಿನಲ್ಲಿದ್ದಾನೆ. ಬಂಧಿತರನ್ನು ಹರಿಯಾಣ ಮೂಲದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ. ಇವರು ಸುಮಾರು 1 ತಿಂಗಳಿಂದ ಹತ್ಯೆಗೆ ಸಂಚು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶೂಟ್‌ ನಡೆಸಿದ ವೇಳೆ ಗ್ಯಾಂಗ್‌ನಲ್ಲಿ ಮೂವರಿದ್ದರು ಎನ್ನಲಾಗಿದ್ದು, ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದಾನೆ.