Monday, 6th January 2025

Shiva Rajkumar: ಆಸ್ಪತ್ರೆಯಿಂದ ಶಿವಣ್ಣ ಡಿಸ್‌ಚಾರ್ಜ್‌; ಜ. 26ಕ್ಕೆ ಬೆಂಗಳೂರಿಗೆ ವಾಪಸ್‌

Shiva Rajkumar

ವಾಷಿಂಗ್ಟನ್‌: ಹ್ಯಾಟ್ರಿಕ್‌ ಹೀರೋ ಶಿವ ರಾಜ್​ಕುಮಾರ್ (Shiva Rajkumar) ಅವರು ಅಮೆರಿಕದಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದ್ದು, ಚೇತರಿಸಿಕೊಂಡ ಅವರು ಇದೀಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ಜ. 26ಕ್ಕೆ ಬೆಂಗಳೂರು ತಲುಪಲಿದ್ದಾರೆ.

ಡಿ. 22ರಂದು ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ದಾಖಲಾಗಿದ್ದ ಶಿವಣ್ಣ ಅವರಿಗೆ ಡಿ. 24ರಂದು ಮೂತ್ರಕೋಶದ ಸರ್ಜರಿ ಆಗಿತ್ತು. ಇದೀಗ 14 ದಿನಗಳ ನಂತರ ಶಿವಣ್ಣ ಡಿಸ್‌ಚಾರ್ಜ್‌ ಆಗಿದ್ದಾರೆ. ಆಸ್ಪತ್ರೆಯ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ಶಿವ ರಾಜ್‌ಕುಮಾರ್‌ ಅವರ ಕುಟುಂಬ ಉಳಿದುಕೊಂಡಿದೆ.

ಜ. 24ಕ್ಕೆ ಭಾರತ್‌ ವಾಪಸ್‌

ಚಿಕಿತ್ಸೆ ನಂತರ ಇನ್ನು 2 ಚೆಕಪ್ ಬಾಕಿ ಇದ್ದು, ಇದನ್ನೆಲ್ಲ ಮುಗಿಸಿಕೊಂಡು ಅವರು ಜ. 24ರ ರಾತ್ರಿ ಭಾರತಕ್ಕೆ ಮರಳಲಿದ್ದಾರೆ. ಜ. 26ಕ್ಕೆ ಶಿವಣ್ಣ ಬೆಂಗಳೂರು ತಲುಪಲಿದ್ದಾರೆ.

ಚಿಕಿತ್ಸೆ ಬಳಿಕ ಶಿವಣ್ಣ ಹೇಳಿದ್ದೇನು?
ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಪೂರ್ಣಗೊಂಡ ಬಳಿಕ ನಟ ಶಿವ ರಾಜ್‌ಕುಮಾರ್‌ ಮಾತನಾಡಿ, ʼತಾನು ಈಗ ಕ್ಯಾನ್ಸರ್‌ ಫ್ರೀʼ ಎಂದು ಹೇಳಿದ್ದರು. ಈ ಕುರಿತು ಆಸ್ಪತ್ರೆಯಿಂದಲೇ ಅವರು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ʼʼಕ್ಯಾನ್ಸರ್‌ ಸೋಂಕಿಗೆ ಒಳಗಾದ ಮೂತ್ರಕೋಶವನ್ನು ರಿಮೂವ್‌ ಮಾಡಲಾಗಿದೆ. ಸೋಂಕು ಇತರ ಕಡೆಗೆ ಹರಡದಂತೆ, ಸೋಂಕಿಗೆ ತುತ್ತಾದ ಮೂತ್ರಕೋಶವನ್ನು ತೆಗೆಯುವ ಅಗತ್ಯ ಕಂಡುಬಂದಿತ್ತು. ಕಿಡ್ನಿಗೆ ಯಾವುದೇ ಅಪಾಯ ಆಗಿಲ್ಲʼʼ ಎಂದು ಶಿವಣ್ಣ ತಿಳಿಸಿದ್ದರು.

“ಚಿಕಿತ್ಸೆಗಾಗಿ ಇಲ್ಲಿಗೆ ಹೊರಡುವಾಗ ಭಯವಿತ್ತು. ಆದರೆ ಯಾರೂ ಇನ್ನು ಭಯಪಡುವ ಅಗತ್ಯವಿಲ್ಲ. ಸರ್ಜರಿ ಯಶಸ್ವಿಯಾಗಿ ಆಗಿದ್ದು, ನಾನು ಕ್ಯಾನ್ಸರ್‌ ಮುಕ್ತ ಆಗಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿ ಯುರಿನರಿ ಬ್ಲಾಡರ್‌ ತೆಗೆದಿದ್ದಾರೆ. ವೈದ್ಯರು ಒಂದು ತಿಂಗಳು ಪೂರ್ತಿ ವಿಶ್ರಾಂತಿ ಪಡೆಯಿರಿ ಎಂದಿದ್ದಾರೆ. ಅದರ ನಂತರ ಮತ್ತೆ ಎಂದಿನ ಶಿವಣ್ಣ ಮರಳಲಿದ್ದಾನೆ. ದುಪ್ಪಟ್ಟು ಚೈತನ್ಯದೊಂದಿಗೆ ಮರಳಿ ಬರಲಿದ್ದೇನೆ. ಶೂಟಿಂಗ್‌, ಫೈಟು, ಡ್ಯಾನ್ಸು ಎಲ್ಲವೂ ಇರಲಿದೆ” ಎಂದಿದ್ದಾರೆ.
“ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನ ವೈದ್ಯರು ಸೇರಿದಂತೆ ತಜ್ಞರು ಧೈರ್ಯ ತುಂಬಿದ್ದಾರೆ. ಪತ್ನಿ ಗೀತಾ, ಮಧು ಸೇರಿದಂತೆ ಹಲವರು ಜತೆಗೆ ಬೆಂಬಲವಾಗಿ ನಿಂತಿದ್ದಾರೆ. ಗೀತಾ ಇಲ್ಲದೆ ಶಿವಣ್ಣ ಇಲ್ಲ. ಆಕೆಯ ಬೆಂಬಲ ಮರೆಯಲು ಸಾಧ್ಯವಿಲ್ಲ. ಜತೆಗೆ ಅಭಿಮಾನಿಗಳಾದ ನೀವೆಲ್ಲರೂ ನನ್ನೊಂದಿಗೆ ನಿಂತಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಮರೆಯೊಲ್ಲʼʼ ಎಂದು ತಿಳಿಸಿದ್ದರು.

“ಹೊರಡುವ ಹೊತ್ತಿನಲ್ಲಿ ಭಯ ಹೆಚ್ಚು ಇತ್ತು. ಹೇಗೆ ಮಾಡಿದೆನೋ ಗೊತ್ತಿಲ್ಲ. ಆದರೆ ಭಯ ನೀಗಿಸೋಕೆ ಅಭಿಮಾನಿ ದೇವರಗಳಿದ್ದರು, ಫ್ರೆಂಡ್ಸ್‌ ಸಂಬಂಧಿಕರು ವೈದ್ಯರು ಎಲ್ಲರೂ ಇದ್ದರು. ವೈದ್ಯರಾದ ಶಶಿಧರ್‌, ದಿಲೀಪ್‌, ಗೀತಾ, ಬಿಕೆಶ್ರೀನಿವಾಸ್‌ ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ’45’ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ಕೀಮೋಥೆರಪಿಯ ನಡುವೆಯೇ ಮಾಡಿದೆ” ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Sandalwood News: ಕಿಚ್ಚ ಸುದೀಪ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ಅಳಿಯ ಸಂಚಿತ್‌ ಸಂಜೀವ್‌ ನಾಯಕ!