Friday, 22nd November 2024

ನಟ, ರಾಜಕಾರಣಿ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ನಿಧನ

ಮುಂಬೈ: ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ಕೃಷ್ಣಂ ರಾಜು ಎಂದೇ ಪ್ರಸಿದ್ಧರಾಗಿರುವ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು(83) ಅವರು ಭಾನು ವಾರ ನಿಧನರಾದರು.

‘ಬಾಹುಬಲಿ’ ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ ರಾಜು ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ರೆಬೆಲ್ ಸ್ಟಾರ್ ಎಂದೇ ಜನಪ್ರಿಯ ಕೃಷ್ಣಂ ರಾಜು ಅವರು ಚಲನಚಿತ್ರ ಹಾಗೂ ರಾಜಕೀಯ ವೃತ್ತಿಜೀವನದಲ್ಲಿ ತನ್ನದೇ ಛಾಪು ಮೂಡಿಸಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ , ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, ಅನುಷ್ಕಾ ಶೆಟ್ಟಿ ಹಾಗೂ ನಟ ನಿಖಿಲ್ ಸಿದ್ಧಾರ್ಥ್ ಅವರು ಕೃಷ್ಣಂರಾಜು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು

ಅನುಷ್ಕಾ ಶೆಟ್ಟಿ ಅವರು ಕೃಷ್ಣಂ ರಾಜು ಅವರೊಂದಿಗಿನ ಥ್ರೋಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಶಾಂತಿಯಿಂದ ವಿಶ್ರಾಂತಿ ಪಡೆಯಲಿ ನಮ್ಮವರೇ ಆದ ಕೃಷ್ಣಂ ರಾಜು ಗಾರು ಎ ಲೆಜೆಂಡ್ ಎ ಸೋಲ್ ವಿಥ್ ದಿ ಬಿಗ್ಗೆಸ್ಟ್ ಹಾರ್ಟ್ ..ನೀವು ನಮ್ಮ ಹೃದಯದಲ್ಲಿ ಬದುಕುವಿರಿ” ಎಂದು ಬರೆದಿದ್ದಾರೆ.

1940 ರಲ್ಲಿ ಜನಿಸಿದ ಕೃಷ್ಣಂ ರಾಜು ಅವರು 1966 ರಲ್ಲಿ ಚಿಲಕ ಗೋರಿಂಕಾ ಚಿತ್ರದ ಮೂಲಕ ಸಿನೆಮಾಕ್ಕೆ ಪ್ರವೇಶ ಮಾಡಿದರು.