ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Vijay) ಸದ್ಯ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮದೇ ಪಕ್ಷ ಹುಟ್ಟು ಹಾಕಿ ರಾಜಕೀಯದತ್ತ ಮುಖ ಮಾಡಿದ್ದಾರೆ. ಚಿತ್ರರಂಗ ತೊರೆಯುವುದಾಗಿ ಘೋಷಿಸಿರುವ ಅವರು ಸದ್ಯ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪಾಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಎಚ್.ವಿನೋತ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ ‘ದಳಪತಿ 69’ (Thalapathy 69) ಎನ್ನುವ ತಾತ್ಕಾಲಿಕ ಶೀರ್ಷಿಕೆ ಮೂಲಕ ಚಿತ್ರೀಕರಣ ಆರಂಭಿಸಲಾಗಿದೆ. ಈ ಮಧ್ಯೆ ವಿಜಯ್ ಅಭಿನಯದ ಈ ಕೊನೆಯ ಚಿತ್ರ ರಿಮೇಕ್ ಎನ್ನುವ ಗುಮಾನಿ ಎದ್ದಿದೆ. ಹಾಗಾದರೆ ಒರಿಜಿನಲ್ ಚಿತ್ರ ಯಾವುದು?
ಕನ್ನಡ ಮೂಲದ ಕೆವಿನ್ ಪ್ರೊಡಕ್ಷನ್ಸ್ ನಿರ್ಮಾಣದ ʼದಳಪತಿ 69ʼ ಚಿತ್ರದ ಮುಹೂರ್ತ ಚಿತ್ತೀಚೆಗೆ ಅದ್ಧೂರಿಯಾಗಿ ನಡೆದಿತ್ತು. ವಿಜಯ್ ನಟನೆಯ ಕೊನೆಯ ಚಿತ್ರ ಇದಾಗಿರುವುದರಿಂದ ಸೆಟ್ಟೇರಿದಾಗಿನಿಂದಲೂ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಈ ಹಿಂದೆ ಕಾಲಿವುಡ್‌ನ ತಲ ಅಜಿತ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಎಚ್.ವಿನೋತ್ ನಿರ್ದೇಶಿಸುತ್ತಿರುವ ಕಾರಣಕ್ಕೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡತಿ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್, ಬಾಬ್ಬಿ ಡಿಯೋಲ್ ಮತ್ತಿತರ ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ.
Yaaaaasss! Hoping to create magic once again with the one and only Thalapathy @actorvijay ❤️ https://t.co/0ZXTsKQ5Kg
— Pooja Hegde (@hegdepooja) October 2, 2024
ಯಾವ ಚಿತ್ರದ ರಿಮೇಕ್?
ಮೂಲಗಳ ಪ್ರಕಾರ 2023ರಲ್ಲಿ ತೆರೆಕಂಡ ತೆಲುಗಿನ ʼಭಗವಂತ್ ಕೇಸರಿʼ ಚಿತ್ರದ ರಿಮೇಕ್ ಈ ʼದಳಪತಿ 69ʼ ಎನ್ನಲಾಗಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ, ಶ್ರೀಲೀಲಾ, ಕಾಜಲ್ ಅಗರ್ವಾಲ್, ಅರ್ಜುನ್ ರಾಂಪಾಲ್ ಮತ್ತಿತರರು ಅಭಿನಯಿಸಿದ್ದರು. ಬಾಕ್ಸ್ ಅಪೀಸ್‌ನಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ನಂದಮೂರಿ ಬಾಲಕೃಷ್ಣ ಅವರ ಸಾಕು ಮಗಳ ಪಾತ್ರದಲ್ಲಿ ಕನ್ನಡತಿ ಶ್ರೀಲೀಲಾ ಮೋಡಿ ಮಾಡಿದ್ದರು. ಇವರಿಬ್ಬರ ಕಾಂಬಿನೇಷನ್ ಚಿತ್ರಪ್ರೇಮಿಗಳ ಮನ ಗೆದ್ದಿತ್ತು. ಇದೀಗ ಈ ಚಿತ್ರವನ್ನು ʼದಳಪತಿ 69ʼ ಆಗಿ ರಿಮೇಕ್ ಮಾಡಲಾಗಿತ್ತದೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಈ ಗಾಳಿ ಸುದ್ದಿ ಹರಡಲೂ ಕಾರಣವಿದೆ. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟ ವಿಟಿವಿ ಗಣೇಶ್ ಹೇಳಿದ್ದ ಮಾತೊಂದು ಇಂತಹ ಗುಮಾನಿ ಮೂಡಲು ಕಾರಣವಾಗಿದೆ. ʼʼತೆಲುಗಿನ ʼಭಗವಂತ್ ಕೇಸರಿʼ ಚಿತ್ರ ತುಂಬಾ ಚೆನ್ನಾಗಿದ್ದು, ಈಗಾಗಲೇ 5 ಬಾರಿ ನೋಡಿದ್ದಾಗಿ ವಿಜಯ್ ನನ್ನ ಬಳಿ ಹೇಳಿದ್ದರು. ಜತೆಗೆ ಆ ಚಿತ್ರದಲ್ಲಿ ಅಭಿನಯಿಸಲು ಅವರು ಬಯಸಿದ್ದರು. ಆದರೆ ಅನಿಲ್ ರವಿಪುಡಿ ರಿಮೇಕ್ ಮಾಡಲು ನಿರಾಕರಿಸಿದ್ದರುʼʼ ಎಂಬುದಾಗಿ ವಿಟಿವಿ ಗಣೇಶ್ ತಿಳಿಸಿದ್ದಾರೆ. ಹೀಗಾಗಿ ಇದು ರಿಮೇಕ್ ಎನ್ನುವ ಅನುಮಾನ ಮೂಡಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ʼದಳಪತಿ 69ʼ ಸಿನಿಮಾಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡುತ್ತಿದ್ದು, ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರ ತೆರೆ ಕಾಣಲಿದೆ.
ಈ ಸುದ್ದಿಯನ್ನೂ ಓದಿ: Thalapathy 69: ದಳಪತಿ ವಿಜಯ್ ಅಭಿನಯದ ಕೊನೆ ಸಿನಿಮಾಕ್ಕೆ ನಾಯಕಿಯಾಗಿ ಕನ್ನಡತಿ ಆಯ್ಕೆ