ಬೆಂಗಳೂರು: ‘ಟಾಕ್ಸಿಕ್’ (Toxic Movie)-ಸದ್ಯ ಇಡೀ ಸಿನಿರಂಗ ಕುತೂಹಲದಿಂದ ನಿರೀಕ್ಷಿಸುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ. ‘ಕೆಜಿಎಫ್’ ಸರಣಿ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿ ಸ್ಯಾಂಡಲ್‌ವುಡ್ ಘಮವನ್ನು ದೇಶಾದ್ಯಂತ ಪಸರಿಸಿದ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರದ ಮೂಲಕ ಗಮನ ಸೆಳೆದ ಮಲೆಯಾಳಂ ಮೂಲದ ಗೀತು ಮೋಹನ್‌ದಾಸ್ (Geetu Mohandas) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಗ್ಯಾಂಗ್‌ಸ್ಟರ್ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಚಿತ್ರದ ಅಪ್‌ಡೇಟ್ ಬಗ್ಗೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಗುಡ್‌ನ್ಯೂಸ್ ಹೊರ ಬಿದ್ದಿದೆ.
ಜ. 8 ಯಶ್ ಅವರ ಜನ್ಮದಿನ. ಈಗಾಗಲೇ ಅವರು ಜನ್ಮದಿನದಂದು ಊರಲ್ಲಿ ಇರುವುದಿಲ್ಲ ಎನ್ನುವುದನ್ನು ತಿಳಿಸಿದ್ದು, ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿತ್ತು. ಇದೀಗ ಆ ನಿರಾಸೆಯನ್ನು ಮರೆಯುವಂತ ಸುದ್ದಿಯೊಂದು ಹೊರಬಿದ್ದಿದೆ.
ಪೋಸ್ಟರ್ ಲಾಂಚ್
ಹೌದು, ಡಿ. 8ರಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲು ‘ಟಾಕ್ಸಿಕ್’ ಚಿತ್ರ ನಿರ್ಮಾಣ ಮಾಡತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಮುಂದಾಗಿದೆ. ಅಂದು ಸಿನಿಮಾದ ಪೋಸ್ಟರ್ ಲಾಂಚ್ ಮಾಡಲು ಚಿತ್ರತಂಡದ ಸಜ್ಜಾಗಿದೆ. ಕಳೆದ ವರ್ಷ ಯಶ್ ಹುಟ್ಟಹಬ್ಬದಂದೇ ʼಟಾಕ್ಸಿಕ್ʼ ಟೈಟಲ್ ಲಾಂಚ್ ಮಾಡಿದ್ದ ಚಿತ್ರತಂಡ ಇದೀಗ 1 ವರ್ಷದ ಬಳಿಕ ಪೋಸ್ಟರ್ ರಿಲೀಸ್ ಮಾಡಲು ನಿರ್ಧರಿಸಿದೆ. ಕಳೆದ ವರ್ಷ ಟೈಟಲ್ ಲಾಂಚ್ ಮಾಡಿದ್ದ ಕೆವಿಎನ್ ಪ್ರೊಡಕ್ಷನ್ಸ್ 2025ರ ಏಪ್ರಿಲ್ 10ರಂದು ಚಿತ್ರ ರಿಲೀಸ್ ಮಾಡುವುದಾಗಿ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿದ್ದು, ಅಂದು ರಿಲೀಸ್ ಆಗುವುದು ಬಹುತೇಕ ಡೌಟ್ ಎನ್ನಲಾಗಿದೆ. ಆದರೆ ಆ ದಿನದಂದು ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಇದೆ.
ಗರಿಗೆದರಿದ ಕುತೂಹಲ
ಸೆಟ್ಟೇರಿದಾಗಿನಿಂದಲೂ ತೀವ್ರ ಕುತೂಹಲ ಕೆರಳಿಸಿರುವ ʼಟಾಕ್ಸಿಕ್ʼ ಚಿತ್ರತಂಡ ಈಗಾಗಲೇ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಿ ಮುಂಬೈಗೆ ತೆರಳಿದೆ. ಗೋವಾದ ಡ್ರಗ್ ಮಾಫಿಯಾದ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಚಿತ್ರತಂಡ ಕಥೆಯ ಕುರಿತಾಗಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಎಂದರೆ ʼಟಾಕ್ಸಿಕ್ʼ ತಂಡವು ಅಮೆರಿಕದ ಖ್ಯಾತ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಕಂಪೆನಿ 20th Century Foxನೊಂದಿಗೆ ಚಿತ್ರದ ಅಂತಾರಾಷ್ಟ್ರೀಯ ಹಕ್ಕು ವಿತರಣೆಯ ಬಗ್ಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. “ಚರ್ಚೆಗಳು ಆರಂಭಿಕ ಹಂತದಲ್ಲಿದೆ. ʼಟಾಕ್ಸಿಕ್ʼ ಅನ್ನು ಜಾಗತಿಕ ಚಿತ್ರವನ್ನಾಗಿಸುವ ಯೋಜನೆ ಇದೆ. ʼಟಾಕ್ಸಿಕ್ʼನ ಕಥೆ ಹೇಳುವ ಮಾದರಿ ಮತ್ತು ದೃಶ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿರುವುದು ಇದಕ್ಕೆ ಕಾರಣʼʼ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ಹೇಳಿದೆ. ಮೂಲಗಳ ಪ್ರಕಾರ ಈ ವರ್ಷದ ಡಿಸೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ತಂತ್ರಜ್ಞರು ಸಿನಿಮಾದ ಭಾಗವಾಗಿದ್ದು, ಕುತೂಹಲ ಇನ್ನಷ್ಟು ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: Actor Yash: ಈ ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಯಶ್! ಅಭಿಮಾನಿಗಳಿಗೆ ಭಾರಿ ನಿರಾಸೆ; ರಾಕಿ ಭಾಯ್ ಬರೆದ ಪತ್ರದಲ್ಲಿ ಏನಿದೆ?