Friday, 20th December 2024

UI Leaked Online: ‘ಯುಐ’ ಚಿತ್ರತಂಡಕ್ಕೆ ಶಾಕ್‌; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್‌

UI Leaked Online

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ‘ಯುಐ’ ಚಿತ್ರ (UI movie) ತೆರೆಕಂಡಿದೆ. ಸುಮಾರು 9 ವರ್ಷಗಳ ಬಳಿಕ ಉಪೇಂದ್ರ (Upendra) ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರ ಇದಾಗಿರುವ ಕಾರಣ ಸೆಟ್ಟೇರಿದಾಗಿನಿಂದಲೇ ಕುತೂಹಲ ಕೆರಳಿಸಿತ್ತು. ನಿರ್ದೇಶನದ ಜತೆಗೆ ಉಪೇಂದ್ರ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಡಿ. 20ರಂದು ಅದ್ಧೂರಿಯಾಗಿ ಬಿಡುಗಡೆಯಾಗಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದವರು ಉಪೇಂದ್ರ ಅವರ ನಿರ್ದೇಶನ, ನಟನೆಗೆ ಜೈ ಎಂದಿದ್ದಾರೆ. ಈ ಮಧ್ಯೆ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ (UI Leaked Online).

‘ಯುಐ’ ತೆರೆಕಂಡ ಕೆಲವೇ ಗಂಟೆಗಳಲ್ಲಿ ವಿವಿಧ ವೆಬ್‌ಸೈಟ್‌ಗಳಲ್ಲಿ ಹರಿದಾಡಿದೆ. ಇದು ಬಾಕ್ಸ್‌ ಆಫೀಸ್‌ನ ಕಲೆಕ್ಷನ್‌ ಮೇಲೆ ಪರಿಣಾಮ ಬೀರಲಿದೆ ಎನ್ನುವ ಆತಂಕ ಎದುರಾಗಿದೆ.

ಎಲ್ಲೆಲ್ಲಿ ಲೀಕ್‌?

ವರದಿಗಳ ಪ್ರಕಾರ, ಮೂವಿರೂಲ್ಸ್‌, ತಮಿಳ್‌ರಾಕರ್ಸ್‌, ಫಿಲ್ಮಿಝಿಲ್ಲಾ, ಮೂವೀಸ್‌ಅಡ್ಡಾ, ತಮಿಳ್‌ಬ್ಲಾಸ್ಟರ್ಸ್‌, ತಮಿಳ್‌ಯೋಗಿ ಮುಂತಾದ ವೆಬ್‌ಸೈಟ್‌ಗಳ ಜತೆಗೆ ಹಲವು ಟೆಲಿಗ್ರಾಂ ಚಾನಲ್‌ಗಳಲ್ಲಿ ‘ಯುಐ’ ಚಿತ್ರ ಕಂಡು ಬಂದಿದೆ. ಚಿತ್ರಕ್ಕೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವೀಕ್ಷಕರು, ವಿಮರ್ಶಕರು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಅದಾಗ್ಯೂ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡದ ಚಿಂತೆಗೆ ಕಾರಣವಾಗಿದೆ.

ಅಪರೂಪದ ಕಥೆ

ಉಪೇಂದ್ರ ನಿರ್ದೇಶಿಸುವ ಸಿನಿಮಾಗಳು ಸಾಮಾನ್ಯವಾಗಿ ಭಿನ್ನವಾಗಿರುತ್ತವೆ. ಅಪರೂಪದ ಕಥೆ ಒಳಗೊಂಡಿರುತ್ತವೆ. ಕಾಲ್ಪನಿಕ ಕಥೆಯ ಬದಲು ಅವರು ನೈಜತೆಗೆ ಒತ್ತು ನೀಡುತ್ತಾರೆ ಎನ್ನುವುದು ಸಿನಿರಸಿಕರ ಅಭಿಪ್ರಾಯ. ಅದು ಈ ಚಿತ್ರದಲ್ಲಿಯೂ ಮುಂದುವರಿದಿದೆ. 2040ರ ಜಗತ್ತು ಹೇಗಿರಲಿದೆ ಎನ್ನುವುದನ್ನು ಅವರು ತೆರೆ ಮೇಲೆ ಅನಾವರಣಗೊಳಿಸಿದ್ದಾರೆ. ಧರ್ಮ, ಯುದ್ಧ, ರಾಜಕೀಯದಿಂದ ಹಿಡಿದು ಎಐ ತಂತ್ರಜ್ಞಾನದವರೆಗೆ ವಿವಿಧ ವಿಷಯಗಳ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ಈ ಮೂಲಕ ವೀಕ್ಷಕರ ಮೆದುಳಿಗೆ ಮತ್ತೊಮ್ಮೆ ಕೈ ಹಾಕಿದ್ದಾರೆ.

ಸುಲಭಕ್ಕೆ ಅರ್ಥವಾಗುವುದಿಲ್ಲ

ಬುದ್ದಿವಂತ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ಉಪೇಂದ್ರ ಮನೋರಂಜನೆಯ ಜತೆಗೆ ಮತ್ತೊಮ್ಮೆ ಪ್ರೇಕ್ಷಕರ ಮೆದುಳಿಗೆ ಕೆಲಸ ಕೊಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಒಂದು ಬಾರಿಗೆ ಅರ್ಥವಾಗುವುದಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಚಿಂತಿಸುವುವಂತೆ ಮಾಡುವ ಉಪೇಂದ್ರ ಅವರು ಈ ಚಿತ್ರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣವಿದೆ. ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

ಈ ಸುದ್ದಿಯನ್ನೂ ಓದಿ: UI movie: ಉಪೇಂದ್ರ ನಟನೆಯ ಯುಐ ಚಿತ್ರ ಡಿ.20ರಂದು ವಿಶ್ವಾದ್ಯಂತ 2000 ತೆರೆಗಳಲ್ಲಿ ಬಿಡುಗಡೆ