ಬೆಂಗಳೂರು: ಸ್ಯಾಂಡಲ್‌ವುಡ್‌ನ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ’ಯುಐ’ (UI Movie) ಕೂಡ ಒಂದು. ನಟ, ನಿರ್ದೇಶಕ ಉಪೇಂದ್ರ (Upendra) ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಈಗಾಗಲೇ ಟೈಟಲ್, ಟೀಸರ್, ಹಾಡು, ಪೋಸ್ಟರ್ ಮೂಲಕ ಪ್ರೇಕ್ಷಕರ ಮನದಲ್ಲಿ ಕುತೂಹಲ ಹುಟ್ಟು ಹಾಕಿದೆ. ಜತೆಗೆ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುವಂತೆ ಮಾಡಿದೆ. ಇದೀಗ ಚಿತ್ರತಂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಈ ಬಗ್ಗೆ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವಾಗ ರಿಲೀಸ್?
ನಟನೆ ಜನತೆಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವ ಉಪೇಂದ್ರ ಅವರ ʼಯುಐʼ ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬರಲಿದೆ. ಆ ಮೂಲಕ ಅಭಿಮಾನಿಗಳನ್ನು ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉಪೇಂದ್ರ ಹಲವು ದಿನಗಳ ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಾಗಿರುವ ಕಾರಣಕ್ಕೆ ʼಯುಐʼ ಕನ್ನಡ ಮಾತ್ರವಲ್ಲ ಪರಭಾಷಿಕರ ಗಮನವನ್ನೂ ಸೆಳೆದಿದೆ. ಸದಾ ಪ್ರೇಕ್ಷಕರ ತಲೆಗೆ ಹುಳ ಬಿಡುವ ಉಪೇಂದ್ರ ಅವರು ʼಯು-ಐʼ ಚಿತ್ರ ರಿಲೀಸ್ ಪೋಸ್ಟರ್‌ನಲ್ಲಿಯೂ ಇದೀಗ ಟ್ವಿಸ್ಟ್ ನೀಡಿದ್ದಾರೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರಿ. ಈ ಸಿನಿಮಾ ನಿಮ್ಮನ್ ನೋಡಿ…ʼʼ ಎಂದು ಮತ್ತೆ ಅಭಿಮಾನಿಗಳಲ್ಲಿ ಕಾತುರ ಹೆಚ್ಚಿಸಿದ್ದಾರೆ.
ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…..
— Upendra (@nimmaupendra) October 14, 2024
All these days you watched the movies and decided weather it’s a hit or a flop. This movie will watch you and….#UiTheMovieOnDEC20th ❤️🔥#UiTheMovie #UppiDirects #Upendra @nimmaupendra… pic.twitter.com/eSo3tAkKNc
ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 18ರಂದು ʼಯುಐʼ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿ ಕುತೂಹಲವನನು ಇನ್ನಷ್ಟು ಎತ್ತರಕ್ಕೆ ಏರಿಸಿತ್ತು. ಕೊಂಬು ಇರುವ ಕುದುರೆ ಮೇಲೆ ಕುಳಿತು ಉಪೇಂದ್ರ ಗಂಭೀರವಾಗಿ ನೋಟ ಹರಿಸುವ ಪೋಸ್ಟರ್ ಇದಾಗಿದ್ದು, ಕಥೆಯ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ʼಟ್ರೋಲ್ ಆಗುತ್ತೆʼ ಹಾಡು ಟ್ರೆಂಡ್ ಸೃಷ್ಟಿಸಿದರೆ, ʼಎಲ್ಲ ಚೀಪ್ ಚೀಪ್ʼ ಹಾಡು ವಿಭಿನ್ನ ಸಾಹಿತ್ಯದಿಂದ ಅನೇಕರನ್ನು ಆಕರ್ಷಿಸಿದೆ. ಅಜನೀಶ್ ಲೋಕನಾಥ್ ಸಂಗೀತ ಈಗಾಗಲೇ ಗಮನ ಸೆಳೆದಿದೆ. ಜತೆಗೆ ಟೀಸರ್ ಹೊಸತನದ ಅನುಭವ ನೀಡಿದೆ. ಈ ಎಲ್ಲ ಕಾರಣಗಳಿಂದ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಸೋತು ಸೊರಗಿರುವ ಸ್ಯಾಂಡಲ್‌ವುಡ್‌ಗೆ ಈ ಸಿನಿಮಾ ಚೈತನ್ಯ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
8 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಪಕರಾದ ಜಿ.ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ತೆರೆಕಂಡ ʼಉಪ್ಪಿ 2ʼ ಚಿತ್ರದ ಬಳಿಕ ಉಪೇಂದ್ರ ನಿರ್ದೇಶಿಸುತ್ತಿರುವ ಸಿನಿಮಾ ಎನ್ನುವ ಕಾರಣಕ್ಕೆ ʼಯುಐʼ ಸೆಟ್ಟೇರಿದಾಗಿನಿಂದಲೇ ಸದ್ದು ಮಾಡುತ್ತಿದೆ. ಸದ್ಯ ಉಪೇಂದ್ರ ʼಯುಐʼ ಜತೆಗೆ ʼ45ʼ ಸಿನಿಮಾ, ರಜನಿಕಾಂತ್ ಜತೆಗೆ ತಮಿಳಿನ ʼಕೂಲಿʼ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Upendra: ʼಯುಐʼ ಚಿತ್ರ ಬಿಡುಗಡೆ ಬಗ್ಗೆ ಉಪೇಂದ್ರ ಹೇಳಿದ್ದೇನು?