ಚೆನ್ನೈ: ಬಹು ನಿರೀಕ್ಷಿತ ಕಾಲಿವುಡ್‌ನ ʼವೆಟ್ಟೈಯಾನ್ʼ (Vettaiyan) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿದೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್ (Rajinikanth) ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಬರೋಬ್ಬರಿ 33 ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಕಾರಣಕ್ಕೆ ಚಿತ್ರ ಸೆಟ್ಟೇರಿದಾಗಿನಿಂದಲೇ ಕುತೂಹಲ ಕೆರಳಿಸಿತ್ತು. ʼಜೈ ಭೀಮ್ʼನಂತಹ ಸೂಕ್ಷ್ಮ ಸಂವೇದಿಯ ಚಿತ್ರ ನಿರ್ದೇಶಿಸಿದ್ದ ಟಿ.ಜಿ.ಜ್ಞಾನವೇಲ್ (TG Gnanavel) ಆ್ಯಕ್ಷನ್ ಕಟ್ ಹೇಳಿರುವ ʼವೆಟ್ಟೈಯಾನ್ʼ ಅಕ್ಟೋಬರ್ 10ರಂದು ಬಿಡುಗಡೆಯಾಗಿ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಈ ಮಧ್ಯೆ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂಗಳಲ್ಲಿ ತೆರೆಕಂಡ ಈ ಸಿನಿಮಾ ಯಾವ ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ (Vettaiyan On OTT).
ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಆ್ಯಕ್ಷನ್ ಕ್ರೈಂ ಡ್ರಾಮ 3 ದಿನಗಳಲ್ಲಿ ಭಾರತದಲ್ಲಿ ಗಳಿಸಿದ್ದು ಬರೋಬ್ಬರಿ ಸುಮಾರು 97.94 ಕೋಟಿ ರೂ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ರೂ. ಗಳಿಸಿದ್ದು, ಒಟ್ಟಾರೆ ಕಲೆಕ್ಷನ್ 147.94 ಕೋಟಿ ರೂ.ಗೆ ತಲುಪಿದೆ. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಗಳಿಕೆ ಉತ್ತಮವಾಗಿದೆ.
ಎನ್‌ಕೌಂಟರ್ ಸರಿಯೇ ತಪ್ಪೇ ಎನ್ನುವ ಬಹು ಚರ್ಚಿತ ವಿಷಯದ ಸುತ್ತ ಈ ಚಿತ್ರದ ಕಥೆ ಸಾಗುತ್ತಿದೆ. ಪೊಲೀಸ್ ಅಧಿಕಾರಿಯಾಗಿ ರಜನಿಕಾಂತ್ ಮತ್ತು ಜಸ್ಟಿಸ್ ಆಗಿ ಅಮಿತಾಭ್ ಬಚ್ಚನ್ ತೆರೆ ಮೇಲೆ ಅಬ್ಬರಿಸಿದ್ದಾರೆ. 3 ದಶಕಗಳ ಬಳಿಕ ಇವರು ಜತೆಯಾಗಿ ಮೋಡಿ ಮಾಡಿದ್ದಾರೆ. ಅಭಿಮಾನಿಗಳು ಇವರ ಜಿದ್ದಾಜಿದ್ದಿನ ಅಭಿನಯಕ್ಕೆ ಫಿದಾ ಆಗಿದ್ದಾರೆ. ಇವರ ಜತೆಗೆ ಮಲಯಾಳಂ ನಟ ಫಹದ್ ಫಾಸಿಲ್ ಪಾತ್ರ ಕೂಡ ಗಮನ ಸೆಳೆದಿದೆ. ಮಂಜು ವಾರಿಯರ್ ಮೊದಲ ಬಾರಿಗೆ ರಜನಿಕಾಂತ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಶಾರ ವಿಜಯನ್, ಕಿಶೋರ್ ಕುಮಾರ್, ಅಭಿರಾಮಿ, ರೋಹಿಣಿ, ಜಿ.ಎಂ.ಸುಂದರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್?
ʼವೆಟ್ಟೈಯಾನ್ʼ ಚಿತ್ರದ ಹಕ್ಕನ್ನು ಅಮೆಜಾನ್ ಪ್ರೈಂ ವಿಡಿಯೊ ಪಡೆದುಕೊಂಡಿದೆ. ಬರೋಬ್ಬರಿ 90 ಕೋಟಿ ರೂ. ಮೊತ್ತಕ್ಕೆ ಚಿತ್ರದ ಹಕ್ಕು ಮಾರಾಟವಾಗಿದೆ ಎನ್ನಲಾಗಿದೆ. ಸ್ಟ್ರೀಮಿಂಗ್ ದಿನಾಂಕ ಶೀಘ್ರದಲ್ಲಿಯೇ ಪ್ರಕಟವಾಗಲಿದೆ. ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನದ ಬಳಿಕ ಒಟಿಟಿಗೆ ಲಗ್ಗೆ ಇಡಲಿದೆ. ಲೈಕಾ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದೆ. 1991ರಲ್ಲಿ ತೆರೆಕಂಡ ʼಹಮ್ʼ ಹಿಂದಿ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಕೊನೆಯ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅದಾಗಿ 3 ದಶಕಗಳ ಬಳಿಕ ಇಬ್ಬರು ತೆರೆ ಹಂಚಿಕೊಂಡಿರುವುದು ವಿಶೇಷ. ಕಳೆದ ವರ್ಷ ತೆರೆಕಂಡ ರಜನಿಕಾಂತ್ ಅಭಿನಯದ ʼಜೈಲರ್ʼ ಸೂಪರ್ ಹಿಟ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Vettaiyan Box Office: ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್-ಬಿಗ್ ಬಿ ಮೋಡಿ ಹೇಗಿದೆ? ಇಲ್ಲಿದೆ ʼವೆಟ್ಟೈಯಾನ್ʼ ಕಲೆಕ್ಷನ್ ವಿವರ