Thursday, 5th December 2024

Vikrant Massey: ಸಿನಿ ಜಗತ್ತಿಗೆ ಗುಡ್ ಬೈ ಹೇಳಿದ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ..!

ಮುಂಬೈ: ‘ಮಿರ್ಜಾಪುರ್’ ವೆಬ್ ಸರಣಿ, ‘12ತ್ ಫೇಲ್’ ಸಿನಿಮಾಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ನಟ ವಿಕ್ರಾಂತ್ ಮೆಸ್ಸಿ(Vikrant Massey) ಇದೀಗ ‘ದಿ ಸಬರಮತಿ ರಿಪೋರ್ಟ್’(The Sabarmati Report) ಹೆಸರಿನ ಸಿನಿಮಾದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಭಾರತದ ಇತಿಹಾಸದ ಕ್ರೂರ ಅಧ್ಯಾಯಗಳಲ್ಲಿ ಒಂದಾದ ಗೋಧ್ರಾ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಗುಜರಾತ್​ನ ‘ಗೋಧ್ರಾ’ನಲ್ಲಿ 2002, ಫೆಬ್ರವರಿ 27 ರಂದು ನಡೆದ ಹತ್ಯಾಕಾಂಡದ ಕತೆ ಹೇಳಲಾಗಿದೆ. ಹಿಂದಿ ಪತ್ರಕರ್ತನೊಬ್ಬ ಆ ಹತ್ಯಾಕಾಂಡದ ಘಟನೆಯನ್ನು ವರದಿ ಮಾಡುವ, ತನಿಖೆ ಮಾಡುವ ಕತೆ ಸಿನಿಮಾದಲ್ಲಿದೆ. ಸಿನಿಮಾವನ್ನು ಧೀರಜ್ ಸರ್ನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ ಜೊತೆಗೆ ರಾಶಿ ಖನ್ನಾ, ರಿಧಿ ದೋಗ್ರಾ ಇನ್ನಿತರರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಟಿವಿ ಲೋಕದ ತಾರೆ ಏಕ್ತಾ ಕಪೂರ್.

ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ನಟ ವಿಕ್ರಾಂತ್ ಮಾಸ್ಸೆ ನಟನೆಯ ಚಿತ್ರ ದಿ ಸಾಬರಮತಿ ವಿಮರ್ಶಕರಿಂದ ಪಾಸಿಟಿವ್‌ ಪ್ರತಿಕ್ರಿಯೆಯನ್ನೂ ಪಡೆದಿತ್ತು. ಈ ಸಿನಿಮಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚಿದ್ದರು… ಸತ್ಯಾಂಶ ಹೊರ ಬರುತ್ತಿದೆ. ಜನ ಸಾಮಾನ್ಯರು ನೋಡುವಂತಾಗಿದೆ ಎಂದಿದ್ದರು. ಸುಳ್ಳಿನ ಕಾಲ ಎಷ್ಟು ದೀರ್ಘವಾದರೂ ಸತ್ಯ ಮಾತ್ರ ಅದನ್ನು ಬದಲಾಯಿಸಬಲ್ಲದು ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು.

ವಿಕ್ರಾಂತ್ ಮಾಸ್ಸೆ(Vikrant Massey) ಅವರ ದಿ ಸಬರಮತಿ ರಿಪೋರ್ಟ್‌ ಸಿನಿಮಾ 2002ರ ಗೋದ್ರಾ ರೈಲು ದುರಂತದ ಕಥೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಚಿತ್ರಮಂದಿರದಲ್ಲಿ ನೋಡುಗರನ್ನು ಸೆಳೆದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಮುಂದಡಿ ಇರಿಸಿದೆ. ಹೀಗಿರುವಾಗಲೇ ನಟ ವಿಕ್ರಾಂತ್ ಮಾಸ್ಸೆ ನಟನೆಗೆ ವಿದಾಯ (Retirement) ಘೋಷಿಸಿದ್ದಾರೆ.

ಹೌದು ಸದಭಿರುಚಿಯ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ(Bollywood) ಖ್ಯಾತಿ ಗಳಿಸಿದ ನಟ ವಿಕ್ರಾಂತ್ ಮಾಸ್ಸೆ ಇದೀಗ ನಟನೆಗೆ ನಿವೃತ್ತಿ ಹೇಳಿದ್ದಾರೆ. ಯಶಸ್ಸಿನ ಕಡಲಿನಲ್ಲಿರುವಾಗಲೇ ವಿಕ್ರಾಂತ್ ಮಾಸ್ಸೆ ಚಿತ್ರರಂಗಕ್ಕೆ ಏಕಾಏಕಿ ಗುಡ್‌ ಬೈ ಹೇಳಿದ್ದು, ಮಾಸ್ಸೆಯ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಈ ನಿರ್ಧಾರದ ಹಿಂದಿನ ಕಾರಣವೇನು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಮ್(Instagram Post) ಪೋಸ್ಟ್ ಹಂಚಿಕೊಂಡಿರುವ ವಿಕ್ರಾಂತ್ ಮಾಸ್ಸೆ ಅವರು, ‘’ಹಲೋ, ಕಳೆದ ಕೆಲವು ವರ್ಷಗಳು ತುಂಬಾ ಉತ್ತಮವಾಗಿದ್ದವು. ನಿಮ್ಮೆಲ್ಲರ ಬೆಂಬಲಕ್ಕೆ ನಾನು ಋಣಿಯಾಗಿದ್ದು, ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ ಇದೀಗ ಮುಂದಿನ ಜೀವನದ ಭಾಗವನ್ನು ನಾನು ನನ್ನ ಕುಟುಂಬಕ್ಕೆ ಮೀಸಲಿಡಲು ನಿರ್ಧಾರಿಸಿದ್ದು, ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡಿದ್ದೇನೆ. ಪತಿಯಾಗಿ, ತಂದೆ ಮತ್ತು ಮಗನಾಗಿ, ಮತ್ತು ನಟನಾಗಿಯೂ ಸಹ. ಆದ್ದರಿಂದ 2025 ರಲ್ಲಿ ಬಿಡುಗಡೆಯಾಗುವ ಚಿತ್ರ ನನ್ನ ಕೊನೆಯ ಚಿತ್ರವಾಗಿರಲಿದೆ… ಮತ್ತೊಮ್ಮೆ ಧನ್ಯವಾದಗಳು. ಎಂದೆಂದಿಗೂ ಋಣಿ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಟ ವಿಕ್ರಾಂತ್ ಮಾಸ್ಸೆ ಪೋಸ್ಟ್ ಹಾಕಿದ್ದಾರೆ.

ವಿಕ್ರಾಂತ್ ಮಾಸ್ಸೆ ಅವರ ಪೋಸ್ಟ್‌ಗೆ, ‘’ನೀವು ಈಗ ಭವಿಷ್ಯದ ಉತ್ತುಂಗದಲ್ಲಿದ್ದೀರಾ. ಹೀಗಿರುವಾಗ ಈ ನಿರ್ಧಾರ ಯಾಕೆ ಮಾಡುತ್ತಿದ್ದೀರಿ… ?, ‘’ನೀವು ಯಾಕೆ ನಿವೃತ್ತಿ ಘೋಷಿಸಿದ್ರಿ? ನಿಮ್ಮಂತಹ ನಟರು ಇರುವುದೇ ಅಪರೂಪ. ನಮಗೆ ಒಳ್ಳೆಯ ಸಿನಿಮಾ ಬೇಕು’’, ‘’ಶಾರುಖ್ ಖಾನ್ ಸಹ ಪತಿ ಹಾಗೂ ತಂದೆ. ಬ್ಯಾಲೆನ್ಸ್ ಮಾಡುವುದು ನಿಮಗೆ ಗೊತ್ತಿದ್ದರೆ, ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಕ್ಲ್ಯಾಶ್ ಆಗುವುದಿಲ್ಲ. ಇದು ನಿಜವೇ ಆಗಿದ್ದರೆ, ಎಷ್ಟೋ ಅಭಿಮಾನಿಗಳ ಹೃದಯ ಚೂರು ಚೂರಾಗುತ್ತದೆ. ನಮಗೆ ನಿಮ್ಮಂತಹ ನಟರು ಬೇಕು’’, ‘’ನಿಮ್ಮಂತಹ ಉತ್ತಮ ನಟರು ಬೇಗ ನಿವೃತ್ತಿ ಪಡೆಯಬಾರದು’’ ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಹಾಗೇ ನಟ ವಿಕ್ರಾಂತ್‌ ಹೀಗೆ ಪೋಸ್ಟ್‌ ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿಮ್ಮ ನಿರ್ಧಾರವನ್ನು ಪುನಃ ಪರಿಶೀಲಿಸಿ ಎಂದರೆ, ಇನ್ನು ಕೆಲವರು, “ನಿಮ್ಮ ಕೆರಿಯರ್‌ ಇದೀಗ ಉತ್ತುಂಗದಲ್ಲಿದೆ. ಇಂಥ ನಿರ್ಧಾರ ಏಕೆ?” ಎಂದಿದ್ದಾರೆ. ಈ ನಡುವೆ, “ಈ ನಿಮ್ಮ ಪೋಸ್ಟ್‌ ಮತ್ತು ಘೋಷಣೆ ಪಬ್ಲಿಸಿಟಿ ಸ್ಟಂಟ್‌ ಅಲ್ಲತಾನೇ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು 2013ರಲ್ಲಿ ಲೂಟೇರಾ ಸಿನಿಮಾ ಮೂಲಕ ಸಿನೆಮಾ ಜರ್ನಿ ಆರಂಭಿಸಿದ ವಿಕ್ರಾಂತ್‌, ಅಲ್ಲಿಂದ ಈ ವರೆಗೂ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ 25ರ ಪೈಕಿ ಇನ್ನೆರಡು ಸಿನಿಮಾಗಳು 2025ರಲ್ಲಿ ರಿಲೀಸ್‌ ಆಗಲಿದ್ದು, ಆ ಸಿನಿಮಾಗಳ ಬಳಿಕ ಚಿತ್ರರಂಗದಿಂದ ದೂರವೇ ಉಳಿಯಲಿದ್ದಾರೆ.

ಈ ಸುದ್ದಿಯನ್ನೂ ಓದಿ: The Sabarmati Report: ʻದಿ ಸಬರಮತಿ ರಿಪೋರ್ಟ್‌ʼ ಚಿತ್ರಕ್ಕೆ ಮಧ್ಯಪ್ರದೇಶ ಸರ್ಕಾರದಿಂದ ಬೆಂಬಲ; ತೆರಿಗೆ ವಿನಾಯಿತಿ ಘೋಷಣೆ