ಬೆಂಗಳೂರು: 2024ಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ. ಹೊಸ ನಿರೀಕ್ಷೆಯೊಂದಿಗೆ ಹೊಸ ವರ್ಷ ಸ್ವಾಗತಿಸಲು ಇಡೀ ಜಗತ್ತೇ ಸಜ್ಜಾಗಿದೆ. ವರ್ಷದ ಕೊನೆಯಲ್ಲಿ ನಿಂತು ಹಿಂದಿರುಗಿ ನೋಡಿದರೆ ಹಲವು ವಿಚಾರಗಳು ಕಣ್ಣ ಮುಂದೆ ಸುಳಿಯುತ್ತವೆ. ಹಾಗೆ ನೋಡಿದರೆ ಸ್ಯಾಂಡಲ್‌ವುಡ್‌ಗೆ ಈ ವರ್ಷ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಆದರೆ ಕನ್ನಡದ ಹಲವು ಕಲಾವಿದರು ಪರಭಾಷೆಯಲ್ಲಿ ಮಿಂಚಿದ್ದಾರೆ, ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ (Year Ender 2024).
ರಶ್ಮಿಕಾ ಮಂದಣ್ಣ
ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ ಪರಭಾಷೆಯಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್, ಬಾಲಿವುಡ್‌ನಲ್ಲಿ ಸದ್ಯ ಅವರದ್ದೇ ಹವಾ. ಅದರಲ್ಲಿಯೂ ಈ ವರ್ಷ ಅತೀ ಹೆಚ್ಚು ಗಳಿಸಿದ ಪ್ಯಾನ್ ಇಂಡಿಯಾ ಚಿತ್ರ ʼಪುಷ್ಪ 2′ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲು ಅರ್ಜುನ್ ಜತೆಗೆ ರಶ್ಮಿಕಾ ಕೂಡ ಮಿಂಚಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಅವರ ನಟನೆಗೆ ಫ್ಯಾನ್ಸ್ ಮಾತ್ರವಲ್ಲಿ ವಿಮರ್ಶಕರೂ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಹಾಡಿನಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ʼಪೀಲಿಂಗ್ಸ್ʼ ಸಾಂಗ್‌ನಲ್ಲಿ ಅಲ್ಲು ಅರ್ಜುನ್‌ಗೆ ಸರಿ ಸಮಾನವಾಗಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಕೊಂಡಿದ್ದಾರೆ. ಜತೆಗೆ ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆಯನ್ನೂ ಪಡೆದುಕೊಂಡಿದ್ದಾರೆ. ಈ ಚಿತ್ರದ ಜತೆಗೆ ಸದ್ಯ ಬಾಲಿವುಡ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. ಹಿಂದಿಯ ಟಾಪ್ ನಾಯಕರಾದ ಸಲ್ಮಾನ್ ಖಾನ್, ಆಯುಷ್ಮಾನ್ ಖುರಾನ ಮತ್ತಿತರರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ ʼದಿ ಗರ್ಲ್‌ಫ್ರೆಂಡ್ʼ, ʼಕುಬೇರʼದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಶ್ರೀಲೀಲಾ
ವರ್ಷಾರಂಭದಲ್ಲಿ ತೆರೆಕಂಡ ತೆಲುಗಿನ ʼಗುಂಟೂರು ಕಾರಂʼ ಚಿತ್ರದ ಮೂಲಕ ಗಮನ ಸೆಳೆದವರು ಶ್ರೀಲೀಲಾ. ಮಹೇಶ್ ಬಾಬು ನಾಯಕನಾಗಿ ನಟಿಸಿದ ಈ ಚಿತ್ರದಲ್ಲಿ ಶ್ರೀಲೀಲಾ ಕೂಡ ಮಿಂಚಿದ್ದಾರೆ. ಅದರಲ್ಲಿಯೂ ʼಕುರುಚಿ ಮಡತಪೆಟ್ಟಿʼ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಈಗಲೂ ಈ ಹಾಡು ಟಾಪ್ ಲಿಸ್ಟ್‌ನಲ್ಲಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ʼಪುಷ್ಪ 2ʼ ಚಿತ್ರದ ʼಕಿಸಕ್ʼ ಐಟಂ ಸಾಂಗ್‌ನಲ್ಲಿಯೂ ಶ್ರೀಲೀಲಾ ಸೊಂಟ ಬಳುಕಿಸಿ ವರ್ಷಾಂತ್ಯದಲ್ಲಿ ನೋಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ಈ ಹಾಡು ಕೂಡ ಟ್ರೆಂಡಿಂಗ್‌ನಲ್ಲಿದೆ. ಮಾತ್ರವಲ್ಲ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕಿ ಸುಧಾ ಕೊಂಗರ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಲೆಯಾಗಿದ್ದಾರೆ. ಆ ಮೂಲಕ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಇದರಲ್ಲಿ ಶಿವಕಾರ್ತಿಕೇಯನ್, ಜಯಂ ರವಿ ಮತ್ತು ಅಥರ್ವ ನಾಯಕರಾಗಿ ನಟಿಸುತ್ತಿದ್ದಾರೆ. ಇದರ ಜತೆಗೆ ಶ್ರೀಲೀಲಾ ಬಾಲಿವುಡ್ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಇನ್ನೇ ಹೊರ ಬರಬೇಕಿದೆ.
ತಾರಕ್ ಪೊನ್ನಪ್ಪ
ʼಪುಷ್ಪ 2′ ಚಿತ್ರದಲ್ಲಿ ಮಿಂಚಿದ ಮತ್ತೊಬ್ಬ ಕನ್ನಡದ ಕಲಾವಿದ ತಾರಕ್ ಪೊನ್ನಪ್ಪ. ಖಡಕ್ ವಿಲನ್ ಆಗಿ ಅವರು ತೆರೆ ಮೇಲೆ ಅಬ್ಬರಿಸಿದ್ದಾರೆ. ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟುವ ಬುಗ್ಗ ರೆಡ್ಡಿಯಾಗಿ ಮನೋಜ್ಞ ಅಭಿನಯದ ಮೂಲಕ ಟಾಲಿವುಡ್ ಮಂದಿಯ ಗಮನ ಸೆಳೆದಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು ನಂತರ ಅವರು ಸ್ಯಾಂಡಲವುಡ್‌ನ ʼಕನ್ನಡ ದೇಶದೋಳ್ʼ, ʼಗಿಲ್ಕಿʼ, ʼಅಮೃತಾ ಅಪಾರ್ಟ್‌ಮೆಂಟ್ʼ ಮುಂತಾದ ಸಿನಿಮಾಗಳನ್ನು ನಟಿಸಿದ್ದರು. ಜತೆಗೆ ಕನ್ನಡದ ಹೆಮ್ಮೆಯ, ಬ್ಲಾಕ್ಬಸ್ಟರ್ ಹಿಟ್ ‘ಕೆಜಿಎಫ್’ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿರುವ ತಾರಕ್ ಪೊನ್ನಪ್ಪ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಸದ್ಯ ಅವರಿಗೆ ಪರಭಾಷೆಗಳಿಂದ ಹಲವು ಆಫರ್ ಬರುತ್ತಿದೆ.
ರಿಷಬ್ ಶೆಟ್ಟಿ
ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ಬಳಿಕ ನಟನಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ ವರ್ಷವಿಡೀ ಸುದ್ದಿಯಲ್ಲಿದ್ದರು. ವರ್ಷಾರಂಭದಲ್ಲಿ ʼಕಾಂತಾರ: ಚಾಪ್ಟರ್ 1ʼ ಚಿತ್ರಕ್ಕೆ ಮುಹೂರ್ತ ನೆರೆವೇರಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದರು. 2022ರಲ್ಲಿ ತೆರೆಕಂಡ ʼಕಾಂತಾರʼ ಸಿನಿಮಾವನ್ನು ನಿರ್ದೇಶಿಸಿ, ನಟಿಸುವ ಮೂಲಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು. ಹೀಗಾಗಿ ಅವರು ʼಕಾಂತಾರʼ ಸಿನಿಮಾದ ಪ್ರೀಕ್ವೆಲ್ ಆಗಿ ʼಕಾಂತಾರ: ಚಾಪ್ಟರ್ 1ʼ ಘೋಷಿಸಿದಾಗ ಸಹಜವಾಗಿ ಕುತೂಹಲ ಕೆರಳಿತ್ತು. ವರ್ಷದ ಮಧ್ಯದಲ್ಲಿ ರಾಷ್ಟ್ರ ಪ್ರಶಸ್ತಿ ಘೋಷಣೆಯಾಯ್ತು. ಅತ್ಯುತ್ತಮ ನಟನಾಗಿ ʼಕಾಂತಾರʼ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಹೆಸರು ಅನೌನ್ಸ್ ಆದಾಗ ಇಡೀ ಸ್ಯಾಂಡಲ್‌ವುಡ್ ಹೆಮ್ಮೆ ಪಟ್ಟುಕೊಂಡಿತು. ಅದಾದ ಬಳಿಕ ಟಾಲಿವುಡ್‌ನ ಬಹು ನಿರೀಕ್ಷಿತ ʼಜೈ ಹನುಮಾನ್ʼ ಚಿತ್ರದ ಹನುಮಂತನ ಪಾತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ದೇಶಾದ್ಯಂತ ಗಮನ ಸೆಳೆದರು. ಜತೆಗೆ ‘ಛತ್ರಪತಿ ಶಿವಾಜಿ’ ಸಿನಿಮಾ ಒಪ್ಪಿಕೊಂಡು ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.
ರಾಜ್ ಬಿ. ಶೆಟ್ಟಿ
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ. ಶಿಟ್ಟಿ ಈ ವರ್ಷ ಮಲೆಯಾಳಂ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅಭಿನಯದ ʼಟರ್ಬೋʼ ಚಿತ್ರದ ಖಡಕ್ ವಿಲನ್ ಮಾತ್ರದಲ್ಲಿ ಗಮನ ಸೆಳೆದರು. ಮಮ್ಮುಟ್ಟಿ ಜತೆಗೆ ಅವರ ಪಾತ್ರಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದಾದ ಬಳಿಕ ʼಕೊಂಡಲ್ʼ, ʼರುಧಿರಂʼ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆ ಮೂಲಕ ಬ್ಯಾಕ್ ಟು ಬ್ಯಾಕ್ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿಶೋರ್
ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಪ್ರತಿಭಾವಂತ ನಟ ಕಿಶೋರ್ ಈ ವರ್ಷ ತಮಿಳು ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ. ರಜನಿಕಾಂತ್ ನಟನೆಯ ʼವೆಟ್ಟೈಯನ್ʼ ಸಿನಿಮಾದಲ್ಲಿ ಕಿಶೋರ್ ಗಮನ ಸೆಳೆದಿದ್ದಾರೆ. ಎಸ್‌ಪಿ ಕೆ.ಹರೀಶ್ ಕುಮಾರ್ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಇದರ ಜತೆಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾ ʼಸಿಕಂದರ್ʼಗೂ ಆಯ್ಕೆಯಾಗಿದ್ದಾರೆ.
ರುಕ್ಮಿಣಿ ವಸಂತ್
ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಈ ವರ್ಷ ಟಾಲಿವುಡ್‌ನಲ್ಲಿಯೂ ಗಮನ ಸೆಳೆದಿದ್ದಾರೆ. ಶಿವ ರಾಜ್‌ಕುಮಾರ್ ಅಭಿನಯದ ʼಭೈರತಿ ರಣಗಲ್ʼ ಮತ್ತು ಶ್ರೀಮುರಳಿ ಜತೆ ʼಬಘೀರʼ ಚಿತ್ರದಲ್ಲಿ ಕಾಣಿಸಿಕೊಂಡ ಅವರು ʼಅಪ್ಪುಡೊ ಇಪ್ಪುಡೊ ಎಪ್ಪುಡೊʼ ಸಿನಿಮಾ ಮೂಲಕ ತೆಲುಗಿಗೂ ಕಾಲಿಟ್ಟಿದ್ದಾರೆ. ಜತೆಗೆ ತಮಿಳಿನ ʼಏಸ್ʼ, ಎ.ಆರ್.ಮುರುಗದಾಸ್, ಶಿವಕಾರ್ತಿಕೇಯನ್ ಕಾಂಬಿನೇಷನ್‌ನ ತಮಿಳು ಸಿನಿಮಾಕ್ಕೆ ಸೆಲೆಕ್ಟ್ ಆಗಿದ್ದಾರೆ. ಮಾತ್ರವಲ್ಲ ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಕಾಂಬಿನೇಷನ್‌ನ ತೆಲುಗು ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ.
ಪ್ರಕಾಶ್ ರಾಜ್
ಸ್ಯಾಂಡಲ್‌ವುಡ್ ಮೂಲದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರಾಜ್ ಈ ವರ್ಷವೂ ಪರಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಮಹೇಶ್ ಬಾಬು, ಜೂ.ಎನ್‌ಟಿಆರ್, ಧನುಷ್ ಮುಂತಾದ ಸ್ಟಾರ್ ನಟರ ಜತೆ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆ ಮೂಲಕ ಬೇಡಿಕೆ ಇಂದಿಗೂ ಉಳಿಸಿಕೊಂಡಿದ್ದಾರೆ.
ಆಶಿಕಾ ರಂಗನಾಥ್
ಕಳೆದ ವರ್ಷ ʼಅಮಿಗೋಸ್ʼ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಈ ವರ್ಷ ತಲಾ ಒಂದೊಂದು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ತೆಲುಗಿನ ʼನಾ ಸಾಮಿ ರಂಗʼ ಸಿನಿಮಾದಲ್ಲಿ ನಟ ನಾರ್ಗಾಜುನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಆಶಿಕಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇನ್ನು ಬಹು ಭಾಷಾ ನಟ ಸಿದ್ಧಾರ್ಥ್ ಜತೆ ಆಶಿಕಾ ನಟಿಸಿದ ʼಮಿಸ್ ಯೂʼ ತಮಿಳು ಚಿತ್ರ ವರ್ಷಾಂತ್ಯದಲ್ಲಿ ರಿಲೀಸ್ ಆಗಿದೆ. ಇದು ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡದಿದ್ದರೂ ಆಶಿಕಾ ನಟನೆಗೆ, ಚೆಲುವಿಗೆ ಪ್ರೇಕ್ಷಕರು ಜೈ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Yearender 2024: ಈ ವರ್ಷ ಡಿವೋರ್ಸ್ ಪಡೆದು ನಾನೊಂದು ತೀರ, ನೀನೊಂದು ತೀರ ಎಂತಾದ ಸೆಲೆಬ್ರಿಟಿಗಳಿವರು