Sunday, 15th December 2024

Money Tips: ಆದಾಯ ತೆರಿಗೆ ರಿಫಂಡ್‌ ಇನ್ನೂ ಬಂದಿಲ್ಲವೆ? ಕಾರಣ, ಪರಿಹಾರ ಇಲ್ಲಿದೆ

Money Tips

ಬೆಂಗಳೂರು: 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆಯ ದಿನಾಂಕ ಜುಲೈ 31ಕ್ಕೆ ಮುಕ್ತಾಯಗೊಂಡಿದೆ. ಇದೀಗ ತೆರಿಗೆದಾರರು  ಆದಾಯ ತೆರಿಗೆಯ ರಿಫಂಡ್‌ (ಮರುಪಾವತಿ)ಗಾಗಿ ಕಾಯುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ  ರಿಫಂಡ್‌ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿದ್ದರು ಈಗಲೂ ಕೆಲವೊಮ್ಮೆ ವಿಳಂಬ ಕಂಡುಬರುತ್ತಿದೆ. ಹಾಗಾದರೆ ನಿಮ್ಮ ಐಟಿಆರ್ (ITR) ರಿಫಂಡ್‌  ಸ್ಥಗಿತಗೊಳ್ಳಲು ಕಾರಣವೇನು? ಇದನ್ನು ಹೇಗೆ ತ್ವರಿತಗೊಳಿಸಬಹುದು ? ಎನ್ನುವ ವಿವರ ಇಲ್ಲಿದೆ (Money Tips).

ಯಾರಿಗೆಲ್ಲ ರಿಫಂಡ್‌ ಲಭ್ಯ?

ಆದಾಯ ತೆರಿಗೆ ಹಾಗೂ ಇತರ ನೇರ ತೆರಿಗೆ ನಿಯಮದ ಪ್ರಕಾರ ನೀವು ಪಾವತಿ ಮಾಡಿದ ಆದಾಯ ತೆರಿಗೆ ನೀವು ನಿಜವಾಗಿ ಆ ಹಣಕಾಸು ವರ್ಷದಲ್ಲಿ ಪಾವತಿ ಮಾಡಬೇಕಾದ ಹಣಕ್ಕಿಂತ ಅಧಿಕವಾಗಿದ್ದರೆ ರಿಫಂಡ್ ಪಡೆಯಲು ಅರ್ಹರಾಗುತ್ತೀರಿ.  ಟಿಡಿಎಸ್, ಸೆಕ್ಯೂರಿಟೀಸ್, ಡಿಬೆಂಚರ್, ಲಾಭಾಂಶ ಮೊದಲ ಬಡ್ಡಿಯು ಪಾವತಿಸಬೇಕಾದ ತೆರಿಗೆಗಿಂತ ಅಧಿಕವಾಗಿದ್ದರರೂ ರಿಫಂಡ್ ಲಭ್ಯವಾಗುತ್ತದೆ. ಜೊತೆಗೆ  ಒಂದು ವೇಳೆ ಬೇರೆ ದೇಶದಲ್ಲಿಯೂ, ಭಾರತದಲ್ಲಿಯೂ ತೆರಿಗೆ ವಿಧಿಸಿದ್ದರೆ ನೀವು ರಿಫಂಡ್ ಪಡೆಯಬಹುದು.

ರಿಫಂಡ್‌ ಪ್ರಕ್ರಿಯೆ ವಿಳಂಬವಾಗಿದ್ದರೆ ಹೀಗೆ ಮಾಡಿ

ರಿಫಂಡ್‌ ಸ್ಟೇಟಸ್‌ ಪರಿಶೀಲನೆ

ಈಗ ನಿಮ್ಮ ರಿಫಂಡ್‌ ಪ್ರಕ್ರಿಯೆ ಬಾಕಿ ಇದೆಯೇ ಅಥವಾ ಯಾವುದಾದರೂ ಸಮಸ್ಯೆ ಇದೆಯೇ ಎನ್ನುವುದನ್ನು ಪರಿಶೀಲಿಸಬಹುದು. ʼʼProcessed with No Demand No Refundʼʼ ಎಂಬ ಸ್ಟೇಟಸ್‌ ಕಂಡು ಬಂದರೆ ರಿಫಂಡ್‌  ಬಾಕಿ ಇಲ್ಲ ಎಂದರ್ಥ.

ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ

ಐಟಿಆರ್‌ನಲ್ಲಿ ಉಲ್ಲೇಖಿಸಲಾದ ಬ್ಯಾಂಕ್ ಖಾತೆಯು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಕ್ರಿಯಗೊಳಿಸಲಾಗಿದೆ ಮತ್ತು ಪೂರ್ವ ಮೌಲ್ಯೀಕರಿಸಲ್ಪಟ್ಟಿದೆ (Pre-validated) ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಪ್ಯಾನ್‌ನೊಂದಿಗೆ ಲಿಂಕ್ ಮಾಡಲಾದ ಪೂರ್ವ-ಮೌಲ್ಯೀಕರಿಸಲ್ಪಟ್ಟ ಬ್ಯಾಂಕ್ ಖಾತೆಗಳಿಗೆ ಮಾತ್ರ ಆದಾಯ ತೆರಿಗೆ ಇಲಾಖೆ ರಿಫಂಡ್‌ ಜಮಾ ಮಾಡುತ್ತದೆ. ಯಾವುದೇ ವ್ಯತ್ಯಾಸವಿದ್ದರೆ, ತಕ್ಷಣ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಿ.

ಐಟಿಆರ್‌ನಲ್ಲಿನ ವಿಳಂಬ ಚೆಕ್‌ ಮಾಡಿ

ನಿಮ್ಮ ರಿಫಂಡ್‌ ಸ್ಥಗಿತಗೊಂಡಿದ್ದರೆ ನೀವು ಸಲ್ಲಿಸಿದ ಐಟಿಆರ್‌ನಲ್ಲಿ ದೋಷಗಳು ಅಥವಾ ವ್ಯತ್ಯಾಸಗಳು ಇರಬಹುದು. ಸಾಮಾನ್ಯವಾಗಿ ತಪ್ಪಾದ ಬ್ಯಾಂಕ್ ವಿವರಗಳು, ಟಿಡಿಎಸ್ / ಟಿಸಿಎಸ್ ಅಥವಾ ಮುಂಗಡ ತೆರಿಗೆ ಡೇಟಾದಲ್ಲಿ ಹೊಂದಾಣಿಕೆಯಾಗದಿರುವುದು ಅಥವಾ ಆದಾಯ ಘೋಷಣೆಯಲ್ಲಿನ ದೋಷಗಳು ಕಂಡುಬರುತ್ತವೆ. ಇವನ್ನು ಪರಿಶೀಲಿಸಿ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139 (5)ರ ಅಡಿಯಲ್ಲಿ ಪರಿಷ್ಕೃತ ರಿಟರ್ನ್ ಸಲ್ಲಿಸುವ ಮೂಲಕ ನೀವು ಈ ತಪ್ಪುಗಳನ್ನು ಸರಿಪಡಿಸಬಹುದು.

ಯಾವುದೇ ಸೂಚನೆ / ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ

ನಿಮ್ಮ ಐಟಿಆರ್‌ಗೆ ಸಂಬಂಧಿಸಿದಂತೆ ಯಾವುದಾದರೂ ಸಂದೇಹವಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿರಬಹುದು. ಇದಕ್ಕಾಗಿ ನಿಮ್ಮ ನೋಂದಾಯಿತ ಇಮೇಲ್ ಮತ್ತು ಇ-ಫೈಲಿಂಗ್ ಪೋರ್ಟಲ್ ಅನ್ನು ಪರಿಶೀಲಿಸಿ. ಸೆಕ್ಷನ್ 143 (1) ಅಥವಾ ಇತರ ಯಾವುದೇ ಸೆಕ್ಷನ್ ಅಡಿಯಲ್ಲಿ ನೀವು ನೋಟಿಸ್ ಸ್ವೀಕರಿಸಿದ್ದರೆ ಅಗತ್ಯ ಮಾಹಿತಿ ನೀಡಿ ಅಥವಾ ಸ್ಪಷ್ಟೀಕರಣದೊಂದಿಗೆ ತಕ್ಷಣ ಪ್ರತಿಕ್ರಿಯಿಸಿ.

ಸಿಪಿಸಿಗೆ ಸಂಪರ್ಕಿಸಿ

ಸಮಸ್ಯೆ ಬಗೆಹರಿದಿಲ್ಲ ಎಂದಾದರೆ ನೀವು ನೇರವಾಗಿ ಬೆಂಗಳೂರಿನ Centralised Processing Centre (CPC) ಅನ್ನು ಸಂಪರ್ಕಿಸಬಹುದು. ಸಿಪಿಸಿ ಐಟಿಆರ್ ಮತ್ತು ರಿಫಂಡ್‌ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಇದಕ್ಕಾಗಿ ಈ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ. 1800 103 0025, 1800 419 0025, +91-80-46122000, +91-80-61464700.

ಈ ಸುದ್ದಿಯನ್ನೂ ಓದಿ: Money Tips: ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅಂಶ ತಿಳಿದಿರಲಿ