Friday, 22nd November 2024

Money Tips: ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Tips

ಬೆಂಗಳೂರು: ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದ ವೃದ್ಧಾಪ್ಯ ಪಿಂಚಣಿ ಯೋಜನೆಯೇ ಅಟಲ್‌ ಪೆನ್ಷನ್‌ ಯೋಜನೆ (Atal Pension Yojana-APY). ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆ ಮೂಲಕ ಖಾತೆದಾರರು ತಿಂಗಳಿಗೆ 5,000 ರೂ.ಗಳವರೆಗೆ ಪಿಂಚಣಿ ಪಡೆಯಬಹುದು. 18ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ (Money Tips).

ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ತಿಂಗಳಿಗೆ 1,000 ರೂ.ಯಿಂದ 5,000 ರೂ.ಗಳವರೆಗೆ ಕನಿಷ್ಠ ಮಾಸಿಕ ಪಿಂಚಣಿ ದೊರೆಯುತ್ತದೆ. ಕೇಂದ್ರವು ಚಂದಾದಾರರ ಕೊಡುಗೆಯ ಶೇ. 50ರಷ್ಟು ಅಥವಾ ವರ್ಷಕ್ಕೆ 1,000 ರೂ. ಪಾವತಿಸಲಿದೆ. ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಒಳಪಡದ ಮತ್ತು ಆದಾಯ ತೆರಿಗೆ ಪಾವತಿಸದವರು ಈ ಯೋಜನೆಗೆ ಅರ್ಹರು.

ಅರ್ಹತೆ

ವಯೋಮಿತಿ: 18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರು ಅಟಲ್‌ ಪಿಂಚಣಿ ಯೋಜನೆಯ ಫಲಾನುಭವಿಗಳಾಗಬಹುದು.
ಬ್ಯಾಂಕ್‌ ಖಾತೆ: ಅರ್ಜಿದಾರರು ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು.
ಆದಾಯ ತೆರಿಗೆ ಪಾವತಿಸದವರು: ಈ ಯೋಜನೆ ಕಡ್ಡಾಯವಾಗಿ ಆದಾಯ ತೆರಿಗೆ ಪಾವತಿಸದವರಿಗೆ ಮಾತ್ರ.
ಆಧಾರ್‌: ಅರ್ಜಿದಾರರು ಬ್ಯಾಂಕ್‌ ಅಕೌಂಟ್‌ನೊಂದಿಗೆ ಲಿಂಕ್‌ ಆಗಿರುವ ಆಧಾರ್‌ ನಂಬರ್‌ ಹೊಂದಿರುವುದು ಕಡ್ಡಾಯ.
ಯಾವುದೇ ಪಿಂಚಣಿ ಯೋಜನೆಯ ಭಾಗವಾಗಿರಬಾರದು: ಅರ್ಜಿದಾರರು ಯಾವುದೇ ಪಿಂಚಣಿ ಯೋಜನೆಯ ಭಾಗವಾಗಿರಬಾರದು ಅಂದರೆ ಇಪಿಎಫ್‌ ಅಥವಾ ಇಎಸ್‌ಐ ಖಾತೆ ಹೊಂದಿರಬಾರದು.

ಯೋಜನೆಯ ವೈಶಿಷ್ಟ್ಯ

ಖಾತರಿ ಪಿಂಚಣಿ: ಅರ್ಜಿದಾರರ ಕೊಡುಗೆಯನ್ನು ಆಧರಿಸಿ 60 ವರ್ಷದ ಬಳಿಕ 1,000 ರೂ. – 5,000 ರೂ. ಮಾಸಿಕ ಪಿಂಚಣಿ ದೊರೆಯಲಿದೆ.
ಸರ್ಕಾರದಿಂದಲೂ ಕೊಡುಗೆ: ಮೊದಲೇ ಹೇಳಿದಂತೆ ಕೇಂದ್ರ ಸರ್ಕಾರವೂ ಈ ಯೋಜನೆಗೆ ಕೊಡುಗೆ ನೀಡಲಿದೆ. ಪ್ರತಿ ವರ್ಷ ಕೇಂದ್ರ ಅರ್ಜಿದಾರರ ಕೊಡುಗೆಯ ಅರ್ಧದಷ್ಟು ಅಥವಾ 1,000 (ಯಾವುದು ಕಡಿಮೆ ಇದೆಯೋ ಅದು) ರೂ. ಅನ್ನು 5 ವರ್ಷಗಳವರೆಗೆ ಪಾವತಿಸಲಿದೆ.
ವಯಸ್ಸಿಗೆ ಅನುಗುಣವಾಗಿ ಪಾವತಿ: ವಯಸ್ಸಿಗನುಗುಣವಾಗಿ ಮಾಸಿಕ ಪಾವತಿಯಲ್ಲಿ ವ್ಯತ್ಯಾಸವಿರುತ್ತದೆ. 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವ ಯಾರಾದರೂ ಮಾಸಿಕ 5,000 ರೂ.ಗಳ ಪಿಂಚಣಿ ಪಡೆಯಲು ತಿಂಗಳಿಗೆ ಕೇವಲ 210 ರೂ. ಪಾವತಿಸಿದರೆ ಸಾಕಾಗುತ್ತದೆ. 40 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವವರು 60 ವರ್ಷದವರೆಗೆ ತಿಂಗಳಿಗೆ 1,454 ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಹಣ ನಿಮ್ಮ ಉಳಿತಾಯ ಖಾತೆಯಿಂದ ಜಮೆ ಆಗುತ್ತದೆ.
ನಾಮಿನಿ ಹೆಸರು ಸೇರಿಸುವ ಸೌಲಭ್ಯ: ಚಂದಾದಾರರು ತಮ್ಮ ಸಂಗಾತಿಯನ್ನು ನಾಮಿನಿಯನ್ನಾಗಿಸುವ ಸೌಲಭ್ಯವೂ ಈ ಯೋಜನೆಯಲ್ಲಿ ಲಭ್ಯ. ಯಾವುದೇ ಕಾರಣದಿಂದ ಚಂದಾದಾರರು ಮರಣ ಹೊಂದಿದರೆ ಪಿಂಚಣಿ ಸಂಗಾತಿಗೆ ಲಭ್ಯವಾಗುತ್ತದೆ. ಒಂದು ವೇಳೆ ಇಬ್ಬರೂ (ಚಂದಾದಾರರು ಮತ್ತು ಸಂಗಾತಿ) ಮರಣದ ಹೊಂದಿದರೆ ಪಿಂಚಣಿ ಹಣ ಅವರ ನಾಮಿನಿಗೆ ಹಿಂದಿರುಗಿಸಲಾಗುತ್ತದೆ.
60 ವರ್ಷದ ಮೊದಲೇ ಮರಣ ಹೊಂದಿದರೆ: ಒಂದುವೇಳೆ ಚಂದಾದಾರರು 60 ವರ್ಷ ತುಂಬುವ ಮೊದಲೇ ಮೃತಪಟ್ಟರೆ ಸಂಗಾತಿ ಈ ಯೋಜನೆಯನ್ನು ಮುಂದುವರಿಸಬಹುದು ಅಥವಾ ಅರ್ಧದಲ್ಲೇ ನಿಲ್ಲಿಸಿಬಿಡಬಹುದು.
ಅಪಾಯ ಮುಕ್ತ: ಇದು ಸರ್ಕಾರದ ಯೋಜನೆಯಾಗಿರುವುದರಿಂದ ಮಾರುಕಟ್ಟೆಯ ಏರಿಳಿತಗಳು ಆದಾಯದ ಮೇಲೆ ಪರಿಣಾಮ ಬೀರುವ ಅಪಾಯವಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

  • ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಅಥವಾ ನೆಟ್‌ ಬ್ಯಾಂಕಿಂಗ್‌ಗೆ ಲಾಗಿನ್‌ ಆಗಿ.
  • ಹೆಸರು, ಹುಟ್ಟಿದ ದಿನಾಂಕ, ಆಧಾರ್‌ ಮತ್ತು ಮೊಬೈಲ್‌ ನಂಬರ್‌ ನೀಡಿ APY ಅರ್ಜಿ ಫಾರಂ ಭರ್ತಿ ಮಾಡಿ.
  • ಅಗತ್ಯವಾಗಿರುವ ಪಿಂಚಣಿ ಮೊತ್ತ (1,000 ರೂ.ಯಿಂದ 5,000 ರೂ.) ಆಯ್ಕೆ ಮಾಡಿ.
  • ಅರ್ಜಿ ಸಲ್ಲಿಸಿ
  • ದಾಖಲಾತಿ ಪರಿಶೀಲನೆ ಬಳಿಕ ಬ್ಯಾಂಕ್‌ APY ಖಾತೆ ನಂಬರ್‌ ಒದಗಿಸಲಿದೆ.

ಈ ಸುದ್ದಿಯನ್ನೂ ಓದಿ: Money Tips: ಆದಾಯ ತೆರಿಗೆ ರಿಫಂಡ್‌ ಇನ್ನೂ ಬಂದಿಲ್ಲವೆ? ಕಾರಣ, ಪರಿಹಾರ ಇಲ್ಲಿದೆ