ಮುಂಬೈ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಪ್ರಮುಖ ನಿರ್ಧಾರಗಳು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಬೀರಬಹುದಾದ ಪರಿಣಾಮಗಳ(Trump Effect on Stock Market) ಬಗ್ಗೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ಹಾಗಾದರೆ ಚರ್ಚೆಯಾಗುತ್ತಿರುವ ಟ್ರಂಪ್ ಅವರ ಸಂಭವನೀಯ ನಡೆಗಳು ಅಥವಾ ನಿರ್ಧಾರಗಳು ಯಾವುದು ಎಂಬುದನ್ನು ನೋಡೋಣ.
ಟ್ರಂಪ್ ಅವರು ಅಮೆರಿಕದಲ್ಲಿ ತೆರಿಗೆ ಇಳಿಸಲಿದ್ದಾರೆಯೇ?
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ನಾನಾ ತೆರಿಗೆಗಳನ್ನು ಕಡಿತಗೊಳಿಸಲು ಬಯಸುತ್ತಿದ್ದಾರೆ. ಇದರಿಂದ ಜನರ ಕೈಯಲ್ಲಿ ದುಡ್ಡು ಉಳಿಯುತ್ತದೆ. ಉಳಿಯುವ ದುಡ್ಡನ್ನು ಜನ ಖರ್ಚು ಮಾಡುತ್ತಾರೆ ಎಂಬುದು ಟ್ರಂಪ್ ನಂಬಿಕೆ. ಹೀಗಾಗಿ ತೆರಿಗೆ ಕಡಿತವಾದರೆ ಜನರು ಹೆಚ್ಚು ಹಣವನ್ನು ಖರ್ಚು ಮಾಡಲಿದ್ದಾರೆ ಮತ್ತು ಇದು ಒಳ್ಳೆಯದು ಎನ್ನುತ್ತಾರೆ ತಜ್ಞರು.ಹೀಗಿದ್ದರೂ, ಇಲ್ಲೊಂದು ನೆಗೆಟಿವ್ ಅಂಶವೂ ಇದೆ. ತೆರಿಗೆ ಕಡಿಮೆಯಾದಾಗ ವೆಚ್ಚಗಳು ಹೆಚ್ಚಬಹುದು. ಆದರೆ ಸರ್ಕಾರದ ತೆರಿಗೆ ಆದಾಯ ಇಳಿಕೆಯಾಗಬಹುದು. ಈ ವಿತ್ತೀಯ ಕೊರತೆಯನ್ನು ಸರ್ಕಾರ ಹೇಗೆ ನಿಭಾಯಿಸಬಹುದು?
- ಆಮದು ತೆರಿಗೆ ಹೆಚ್ಚಳ ಸಂಭವ: ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು ಚೀನಾದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಕನಿಷ್ಠ 60% ತೆರಿಗೆ ವಿಧಿಸುವ ಪ್ರಸ್ತಾಪವನ್ನು ತಿಳಿಸಿದ್ದಾರೆ. ಚೀನಾಕ್ಕೆ ಮೋಸ್ಟ್ ಫೇವರ್ಡ್ ನೇಶನ್ ಟ್ರೇಡ್ ಮಾನ್ಯತೆಯನ್ನು ರದ್ದುಪಡಿಸಲೂ ಟ್ರಂಪ್ ಉದ್ದೇಶಿಸಿದ್ದಾರೆ. ಇದರಿಂದ ಅಮೆರಿಕ ಸರ್ಕಾರಕ್ಕೆ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ. ವಿತ್ತೀಯ ಕೊರತೆ ನಿಭಾಯಿಸಲು ಅನುಲೂಲವಾಗಬಹುದು. ಆದರೆ ಇಲ್ಲೂ ಒಂದು ಸೈಡ್ ಎಫೆಕ್ಟ್ ಇದೆ. ಚೀನಾದಿಂದ ಆಮದಾಗುವ ವಸ್ತುಗಳ ದರ ಗಗನಕ್ಕೇರಬಹುದು. ಇದರ ಪರಿಣಾಮ ಹಣದುಬ್ಬರ ಕೂಡ ಹೆಚ್ಚುವ ನಿರೀಕ್ಷೆ ಇದೆ.
- ಹಣದುಬ್ಬರ: ಕಳೆದ ಮೂರು ವರ್ಷಗಳಿಂದ ಅಮೆರಿಕದಲ್ಲಿ ಹಣದುಬ್ಬರ ಏರುಗತಿಯಲ್ಲಿದೆ. ಬೆಲೆ ಏರಿಕೆಯಿಂದ ಜನ ಕಂಗಲಾಗಿದ್ದಾರೆ. ಆದ್ದರಿಂದ ಹಣದುಬ್ಬರವನ್ನು ನಿಯಂತ್ರಿಸಲು ಅಲ್ಲಿನ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ತಗ್ಗಿಸುತ್ತಿದೆ.
- ವಲಸೆಗೆ ಟ್ರಂಪ್ ವಿರೋಧ: ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅಕ್ರಮವಾಗಿ ಒಳ ನುಸುಳುವವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಜತೆಗೆ ವಲಸೆಯನ್ನೂ ನಿಯಂತ್ರಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗಕ್ಕೆ ಹೊರಗಿನವರ ವಲಸೆಯೂ ಒಂದು ಕಾರಣ ಎನ್ನುವುದು ಟ್ರಂಪ್ ಅವರ ವಾದ.
- ಕಚ್ಚಾ ತೈಲೋತ್ಪಾದನೆ ಹೆಚ್ಚಳ: ಅಮೆರಿಕದಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಯನ್ನು ಹೆಚ್ಚಿಸಲಾಗುವುದು. ಇದರಿಂದ ಕಚ್ಚಾ ತೈಲ ಮತ್ತು ಅನಿಲದ ದರ ಇಳಿಕೆಯಾಗಲಿದೆ. ಆಗ ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಉದ್ಯೋಗ ಸೃಷ್ಟಿ ಹೆಚ್ಚಲಿದೆ ಎಂಬುದು ಟ್ರಂಪ್ ಅವರ ನಿಲುವು. ಕಷ್ಷಾ ತೈಲ ದರ ಇಳಿಕೆಯಾದರೆ ಭಾರತದಲ್ಲಿ ಮೂರು ಸೆಕ್ಟರ್‌ಗಳಲ್ಲಿನ ಕಂಪನಿಗಳಿಗೆ ಲಾಭವಾಗಲಿದೆ. ಅವುಗಳೆಂದರೆ ಪೇಂಟಿಂಗ್ ಇಂಡಸ್ಟ್ರಿಯಲ್ಲಿರುವ ಕಂಪನಿಗಳು, ತೈಲ ಕಂಪನಿಗಳು ಮತ್ತು ವಿಮಾನಯಾನ ಕ್ಷೇತ್ರದ ಕಂಪನಿಗಳು. ಏಕೆಂದರೆ ಈ ಮೂರು ಸೆಕ್ಟರ್‌ನ ಕಂಪನಿಗಳು ಕಚ್ಚಾ ತೈಲವನ್ನು ಅವಲಂಬಿಸಿವೆ.
ಟ್ರಂಪ್ ಅವರ ಈ ಐದು ನಿಲುವುಗಳು ನಾನಾ ಉದ್ಯಮಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಆ ಸೆಕ್ಟರ್‌ಗಳ ಬಗ್ಗೆ ನೋಡೋಣ.
- ಔಷಧಗಳ ಉತ್ಪಾದನೆ ವಲಯ: ಅಮೆರಿಕದ ಪ್ರಮುಖ ಔಷಧ ಕಂಪನಿಗಳು 2018ಕ್ಕೆ ಮುನ್ನ ಔಷಧ, ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸಗಳನ್ನು ಹೊರಗುತ್ತಿಗೆ ನೀಡುತ್ತಿದ್ದವು. ಏಕೆಂದರೆ ಅದು ಬಹಳ ಅಗ್ಗವಾಗುತ್ತಿತ್ತು. ನೀವು ಸಿಡಿಎಂಒ ಬಿಸಿನೆಸ್ ಬಗ್ಗೆ ಕೇಳಿರಬಹುದು. ಅಂದರೆ ಕಾಂಟ್ರ್ಯಾಕ್ಟ್ ಡೆವಲಪ್‌ಮೆಂಟ್ ಆಂಡ್ ಮಾನ್ಯುಫಾಕ್ಚರಿಂಗ್ ಆರ್ಗನೈಸೇಶನ್. ಫಾರ್ಮಾಸ್ಯುಟಿಕಲ್ ಕಂಪನಿಗಳಿಗೆ ಇದು ಬಹು ದೊಡ್ಡ ಆದಾಯದ ಮೂಲವಾಗಿದೆ. ಆದರೆ ಟ್ರಂಪ್ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಚೀನಾದ ವಸ್ತುಗಳ ಮೇಲೆ ಭಾರಿ ತೆರಿಗೆಯನ್ನು ವಿಧಿಸಲಾಯಿತು. ಇದರಿಂದಾಗಿ ಚೀನಾದ ಮಾರುಕಟ್ಟೆ ಮೇಲೆ ಹೊಡೆತ ಬಿತ್ತು. ಇದೀಗ ಮತ್ತೆ ಟ್ರಂಪ್ ಅಧ್ಯಕ್ಷರಾಗಿರುವುದರಿಂದ ಭಾರತೀಯ ಮೂಲದ ಔಷಧ ಉತ್ಪಾದಕ ಕಂಪನಿಗಳಿಗೆ ಹೆಚ್ಚಿನ ಬಿಸಿನೆಸ್ ಸಿಗುವ ನಿರೀಕ್ಷೆ ಇದೆ. ಮುಂದಿನ 5 ವರ್ಷದಲ್ಲಿ ಭಾರತದ ಸಿಡಿಎಂಒ ಸೆಕ್ಟರ್ ಬೆಳೆಯುವ ನಿರೀಕ್ಷೆ ಇದೆ. ಈ ಸೆಕ್ಟರ್‌ನಲ್ಲಿ ಡಿವೀಸ್ ಲ್ಯಾಬೊರೇಟರಿ, ಸುವೆನ್ ಫಾರ್ಮಾ, ನಿಯುಲಾಂಡ್ ಲ್ಯಾಬ್ಸ್, ಪಿರಮಲ್ ಫಾರ್ಮಾ, ಜ್ಯುಬಿಲಿಯೆಂಟ್ ಫಾರ್ಮಾ ಮುಂತಾದ ಕಂಪನಿಗಳು ಇವೆ.
- ಐಟಿ ಕಂಪನಿಗಳ ಮೇಲೆ ಪರಿಣಾಮವೇನು?
ಡೊನಾಲ್ಡ್ ಟ್ರಂಪ್ ಅವರು ವಲಸೆ ನೀತಿಯನ್ನು ಬಿಗಿಗೊಳಿಸಿದರೂ, ಭಾರತೀಯ ಐಟಿ ಕಂಪನಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇಲ್ಲ. ಏಕೆಂದರೆ ಈಗ ಭಾರತೀಯ ಐಟಿ ಕಂಪನಿಗಳು ಮೆಚ್ಯೂರ್ ಆಗಿವೆ. ಹಾಗೂ ಅಮೆರಿಕದಲ್ಲಿಯೇ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಗಳನ್ನು ಕೊಟ್ಟಿವೆ. ವಾಸ್ತವವಾಗಿ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಲು ಟ್ರಂಪ್ ಆಲೋಚಿಸುತ್ತಿರುವುದರಿಂದ ಐಟಿ ಕಂಪನಿಗಳಿಗೆ ಲಾಭವಾಗಲಿದೆ. ಅಮೆರಿಕದ ಕಂಪನಿಗಳಿಗೆ ತೆರಿಗೆಯಲ್ಲಿ ಉಳಿತಾಯವಾದರೆ ಹೊಸ ಹೂಡಿಕೆ ಮತ್ತು ಖರ್ಚನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಆಗ ಭಾರತೀಯ ಐಟಿ ಕಂಪನಿಗಳಿಗೆ ಅನುಕೂಲವಾಗಲಿದೆ. ಆದರೆ ನಿಫ್ಟಿ ಐಟಿ ಪಿಇ ರೇಶಿಯೊ ಈಗ 33.3 ಇದ್ದು, ಐದು ವರ್ಷಗಳ ಸರಾಸರಿಗಿಂತ ಹೆಚ್ಚು ಇದೆ. ಅದು 28 ಇದೆ. ಆದ್ದರಿಂದ ಷೇರುಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. - ಬ್ಯಾಂಕಿಂಗ್ ಮತ್ತು ಎನ್‌ಬಿಎಫ್‌ಸಿ ಕ್ಷೇತ್ರದ ಮೇಲೆ ಪರಿಣಾಮವೇನು? ಅಮೆರಿಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಟ್ರಂಪ್ ಹೆಚ್ಚಿನ ನಿರ್ಬಂಧ ವಿಧಿಸುವ ಸಾಧ್ಯತೆ ಇಲ್ಲ.ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕದಲ್ಲಿನ ಬ್ಯಾಂಕ್‌ಗಳು ಬಡ್ಡಿ ದರವನ್ನಿ ಇಳಿಸದಿದ್ದರೆ, ಅಲ್ಲಿನ ಬ್ಯಾಂಕ್ ಗಳಿಂದ ಸಾಲ ಪಡೆಯುವ ಭಾರತೀಯ ಬ್ಯಾಂಕ್‌ಗಳಿಗೆ ಅದು ದುಬಾರಿಯಾಗಬಹುದು. ಆದರೂ, ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ನಿಫ್ಟಿ ಪಿಇ ರೇಶಿಯೊ 14.2 ಇದ್ದು, ಅಗ್ಗವಾಗಿದೆ. ಅಂಡರ್ ವಾಲ್ಯೂ ಆಗಿರುವುದನ್ನು ಕಾಣಬಹುದು. ಐದು ವರ್ಷಗಳ ಸರಾಸರಿ ಪಿಇ ರೇಶಿಯೊ 21 ಆಗಿದೆ. ಭಾರತದ ಜಿಡಿಪಿ ಕೂಡ ಸ್ಥಿರವಾಗಿ ಬೆಳೆಯುತ್ತಿರುವುದರಿಂದ ಆತಂಕಕ್ಕೆ ಕಾರಣವಿಲ್ಲ.
- ರಾಸಾಯನಿಕ ವಸ್ತುಗಳ ಕ್ಷೇತ್ರ: ಕಳೆದ ಸಲ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಆಮದಾಗುವ ರಾಸಾಯನಿಕಗಳ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದರು. ಈ ಸಲ ಚೀನಾದ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ, ಭಾರತೀಯ ಕಂಪನಿಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ.
- ನಿಫ್ಟಿ ಕಮಾಡಿಟಿ ಇಂಡೆಕ್ಸ್ ಮೇಲೆ ಟ್ರಂಪ್ ಪ್ರಭಾವವೇನು?
ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ತೈಲ ಮತ್ತು ಗ್ಯಾಸ್, ಲೋಹಗಳು ಮತ್ತು ಗಣಿಗಾರಿಕೆ, ರಾಸಾಯನಿಕಗಳು, ವಿದ್ಯುತ್, ನಿರ್ಮಾಣ ಕ್ಷೇತ್ರದ ವಸ್ತುಗಳು ಮತ್ತು ಕ್ಯಾಪಿಟಲ್ ಗೂಡ್ಸ್ ಪ್ರಭಾವ ಬೀರುತ್ತವೆ. ವಿದ್ಯುತ್, ನಿರ್ಮಾಣ ವಲಯದ ವಸ್ತುಗಳು ಮತ್ತು ಕ್ಯಾಪಿಟಲ್ ಗೂಡ್ಸ್ ಸೆಕ್ಟರ್‌ಗಳು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ. ಈ ಮೂರು ಕ್ಷೇತ್ರಗಳ ಮೇಲೆ ಟ್ರಂಪ್ ಆಡಳಿತದಿಂದ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇಲ್ಲ. - ಅಮೆರಿಕವು ಚೀನಾದಿಂದ ಆಮದಾಗುವ ವಸ್ತುಗಳಿಗೆ ಭಾರಿ ತೆರಿಗೆ ವಿಧಿಸಿದರೆ ಭಾರತದ ನಿರ್ಮಾಣ ವಲಯ ಮತ್ತು ಕ್ಯಾಪಿಟಲ್ ಗೂಡ್ಸ್ ಕಂಪನಿಗಳಿಗೆ ಹೆಚ್ಚಿನ ಬಿಸಿನೆಸ್ ಸಿಗಬಹುದು. ಹೀಗಿದ್ದರೂ ಚೀನಾ ಕೂಡ ಕಳೆದ ಕೆಲವು ವರ್ಷಗಳಿಂದ ಬೇರೆಯೇ ತಂತ್ರಗಾರಿಕೆ ಪ್ರಯೋಗಿಸುತ್ತಿದೆ. ಅದು ವಿಯೆಟ್ನಾಂ, ಮೆಕ್ಸಿಕೊ ಮತ್ತು ದಕ್ಷಿಣ ಕೊರಿಯಾಕ್ಕೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಅಲ್ಲಿಂದ ಅಮೆರಿಕಕ್ಕೆ ರಫ್ತಾಗುತ್ತದೆ. ಆ ದೇಶಗಳಿಂದ ಕಡಿಮೆ ತೆರಿಗೆಯ ಲಾಭವನ್ನು ಚೀನಾ ಪಡೆಯುತ್ತದೆ. ಈ ಅಂಶವನ್ನೂ ಗಮನಿಸಬಹುದು.
- ಡಾಲರ್ ಪ್ರಾಬಲ್ಯ: ಅಮೆರಿಕದಲ್ಲಿ ಡಾಲರ್ ಪ್ರಾಬಲ್ಯ ಮುಂದುವರಿದರೆ, ಅಮೆರಿಕದಿಂದ ಆಮದು ಭಾರತಕ್ಕೆ ದುಬಾರಿಯಾಗಬಹುದು. ಇದನ್ನೂ ಗಮನಿಸಬೇಕಾಗುತ್ತದೆ. ಆದರೂ, ಒಟ್ಟಾರೆಯಾಗಿ ಭಾರತಕ್ಕೆ ಅನುಕೂಲಕರ ಅಂಶಗಳು ಇದೆ. ಅದನ್ನು ಉದ್ದಿಮೆ ವಲಯ ಬಳಸಿಕೊಳ್ಳುವುದು ಜಾಣ್ಮೆಯ ನಡೆಯಾಗಬಲ್ಲುದು.
ಈ ಸುದ್ದಿಯನ್ನೂಓದಿ: Gold Price Today: ಚಿನ್ನದ ದರದಲ್ಲಿ ಇಳಿಕೆ; ಇಂದಿನ ರೇಟ್ ಹೇಗಿದೆ?