ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Nithin Kamath: ಸ್ಟಾಕ್ ಹೂಡಿಕೆದಾರರು ಏನು ಮಾಡಬೇಕು? ಜೆರೋಧಾ ನಿತಿನ್‌ ಕಾಮತ್‌ ಸಲಹೆ

ಕಳೆದ ವರ್ಷ ಸೆಪ್ಟೆಂಬರ್‌ 27ಕ್ಕೆ 85,978 ಅಂಕಗಳ ದಾಖಲೆಯ ಎತ್ತರದಲ್ಲಿದ್ದ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆಕ್ಸ್‌ ಇಂದು 73,100 ಅಂಕಗಳಿಗೆ ಕುಸಿದಿದೆ. ಇಂಥ ಸಂದರ್ಭದಲ್ಲಿ ಮ್ಯೂಚುವಲ್‌ ಫಂಡ್‌ ಮತ್ತು ಸ್ಟಾಕ್‌ಗಳಲ್ಲಿ ಹೂಡಿಕೆದಾರರು ಏನು ಮಾಡಬೇಕು? ಹೂಡಿಕೆದಾರರು ಏನು ಮಾಡಬಹುದು ಎಂಬುದಕ್ಕೆ ಜೆರೋಧಾ ಸಂಸ್ಥೆಯ ಸಿಇಒ ನಿತಿನ್‌ ಕಾಮತ್‌ ಸೇರಿದಂತೆ ಹಲವು ತಜ್ಞರು ಸಕಾಲಿಕ ಸಲಹೆ ನೀಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ಸ್ಟಾಕ್ ಹೂಡಿಕೆದಾರರು ಏನು ಮಾಡಬೇಕು? ಜೆರೋಧಾ ನಿತಿನ್‌ ಕಾಮತ್‌ ಸಲಹೆ

ನಿತಿನ್‌ ಕಾಮತ್‌.

Profile Ramesh B Mar 3, 2025 6:10 PM

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್‌ 27ಕ್ಕೆ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆಕ್ಸ್‌, 85,978 ಅಂಕಗಳ ದಾಖಲೆಯ ಎತ್ತರದಲ್ಲಿತ್ತು. ಆದರೆ ಇಂದು 73,100 ಅಂಕಗಳಿಗೆ ಕುಸಿದಿದೆ. ಅಂದರೆ ಎತ್ತರದಿಂದ 12,400 ಅಂಕಗಳ ಭಾರೀ ಪತನವನ್ನು ಕಂಡಿದೆ. ಇಂಥ ಸಂದರ್ಭದಲ್ಲಿ ಮ್ಯೂಚುವಲ್‌ ಫಂಡ್‌ ಮತ್ತು ಸ್ಟಾಕ್‌ಗಳಲ್ಲಿ ಹೂಡಿಕೆದಾರರು ಏನು ಮಾಡಬೇಕು? ಹೂಡಿಕೆದಾರರು ಏನು ಮಾಡಬಹುದು ಎಂಬುದಕ್ಕೆ ಜೆರೋಧಾ (Zerodha) ಸಂಸ್ಥೆಯ ಸಿಇಒ ನಿತಿನ್‌ ಕಾಮತ್‌ (Nithin Kamath) ಸೇರಿದಂತೆ ಹಲವು ತಜ್ಞರು ಸಕಾಲಿಕ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ವಿವರವಾಗಿ ತಿಳಿಯೋಣ.

ಕೋವಿಡ್‌ ಬಿಕ್ಕಟ್ಟಿನ ಬಳಿಕ ಸ್ಟಾಕ್‌ ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿದವರಿಗೆ ಇದು ಮೊದಲ ರಿಯಲ್‌ ಮಾರ್ಕೆಟ್ ಕರೆಕ್ಷನ್ ಎನ್ನುತ್ತಾರೆ ಸ್ಟಾಕ್‌ ಬ್ರೋಕರೇಜ್‌ ಸಂಸ್ಥೆ ಜೆರೋಧಾದ ಸಿಇಒ ನಿತಿನ್‌ ಕಾಮತ್‌. ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲೊಂದು ಪೋಸ್ಟ್‌ ಹಾಕಿದ್ದಾರೆ. ಮಾರುಕಟ್ಟೆ ಕೊನೆಗೂ ಕರೆಕ್ಷನ್‌ ಆಗುತ್ತಿದೆ. For investors who started investing after the pandemic, this is the first real market correction. ಆದ್ದರಿಂದಲೇ ತೀವ್ರ ಏರಿಳಿತವನ್ನು ಕಾಣುತ್ತಿದೆ ಎನ್ನುತ್ತಾರೆ ನಿತಿನ್‌ ಕಾಮತ್.‌



2020ರ ಅಂತ್ಯದಿಂದ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಏರುತ್ತಲೇ ಬಂದಿವೆ. ಈಗ ಮಾರುಕಟ್ಟೆ ಕರೆಕ್ಷನ್‌ ಆಗ್ತಾ ಇರೋದು ಸ್ವಾಗತಾರ್ಹ. ನೀವು 2021ರಿಂದ ಮಾರುಕಟ್ಟೆಯ ಏರಿಕೆಯ ಅವರೇಜ್‌ ಅನ್ನು ಗಳಿಸಿದ್ದೀರಿ. ಈಗ ಮಾರುಕಟ್ಟೆಯ ಇಳಿಕೆಯ ಅವರೇಜ್‌ ಅನ್ನು ಪಡೆಯುತ್ತಿದ್ದೀರಿ. 2020ರಲ್ಲಿ ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ಗಳು 25-40% ಇಳಿದಿತ್ತು. ಬಳಿಕ 200-400% ಏರಿಕೆಯನ್ನೂ ದಾಖಲಿಸಿತ್ತು. ಈಗ ನೀವು ಆತಂಕಕ್ಕೀಡಾದರೆ, ಮಾರುಕಟ್ಟೆ ರಿಬೌಂಡ್‌ ಆಗುವಾಗ, ಚೇತರಿಸುವಾಗ ಸಿಗುವ ಲಾಭವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ನಿಯಮಿತವಾಗಿ, ವೈವಿಧ್ಯಮಯವಾಗಿ, ಶಿಸ್ತುಬದ್ಧವಾಗಿ, ನಿಮ್ಮ ಸಿಪ್‌ ಹೂಡಿಕೆಯನ್ನು ದೀರ್ಘಾವಧಿಗೆ ಮುಂದುವರಿಸಿ ಲಾಭ ಪಡೆಯಬಹುದು. ಆಗ ನಿಮಗೆ ಹೂಡಿಕೆಯಲ್ಲಿ ಯಶಸ್ಸಿ ಸಿಗುವ ಸಾಧ್ಯತೆಯೂ ಹೆಚ್ಚು ಎಂದು ವಿವರಿಸಿದ್ದಾರೆ ನಿತಿನ್‌ ಕಾಮತ್.

ಹೂಡಿಕೆದಾರರು ಮಾಡುವ ಎರಡನೇ ತಪ್ಪು ಸಾಲ ಮಾಡಿ ಹೂಡಿಕೆ ಮಾಡುವುದು. ಲಾಭ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಸಾಲ ಸೋಲ ಮಾಡಿ ಹಣದ ಹೂಡಿಕೆ ಮಾಡುವ ತಪ್ಪಿಗೆ ಹೋಗಬಾರದು ಎನ್ನುತಾರೆ ನಿತಿನ್‌ ಕಾಮತ್.‌

ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಪ್‌ ಮೂಲಕ ಹೂಡಿಕೆ ಮಾಡುತ್ತಿರುವವರಲ್ಲಿ ಹಲವಾರು ಮಂದಿ ಸಿಪ್‌ಗಳನ್ನು ನಿಲ್ಲಿಸಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಆದರೆ ಇದು ತಪ್ಪು ನಡೆಯಾಗಿದೆ. ಸಿಪ್‌ ಅನ್ನು ಮುಂದುವರಿಸುವುದರಿಂದ ಮಾರುಕಟ್ಟೆಯ ಏರಿಳಿತಗಳಲ್ಲಿ ನಿಮ್ಮ ಹೂಡಿಕೆಯ ಅವರೇಜ್‌ ಅನ್ನು ಸುಧಾರಿಸಲು ಅನುಕೂಲವಾಗುತ್ತದೆ ಎಂದು ಕಾಮತ್‌ ಅವರು ಸಲಹೆ ನೀಡಿದ್ದಾರೆ.

ಸೂಚ್ಯಂಕಗಳು ಏರಿದಷ್ಟೇ ಇಳಿಯಬಹುದು. ಮಾರುಕಟ್ಟೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಬ್ರೋಕಿಂಗ್‌ ಇಂಡಸ್ಟ್ರಿಯಲ್ಲಿ ಟ್ರೇಡರ್ಸ್‌ ಮತ್ತು ವಾಲ್ಯೂಮ್‌ಗಳ ಸಂಖ್ಯೆ 30% ಇಳಿಕೆಯಾಗಿದೆ. ಈ ಇಳಿಕೆಯ ಟ್ರೆಂಡ್‌ ಮುಂದುವರಿದರೆ 2025-26ರಲ್ಲಿ ಸರಕಾರಕ್ಕೆ ಸೆಕ್ಯುರಿಟೀಸ್‌ ಟ್ರಾನ್ಸಕ್ಷನ್‌ ಆಕ್ಟ್‌ ಅಡಿಯಲ್ಲಿ, ಅಂದ್ರೆ ಷೇರುಗಳ ಖರೀದಿ-ಮಾರಾಟದ ಮೇಲೆ ವಿಧಿಸುವ ತೆರಿಗೆಯ ಸಂಗ್ರಹದಲ್ಲಿ 50 ಪರ್ಸೆಂಟ್‌ ಇಳಿಯಬಹುದು. ಅಂದಾಜು 80,000 ಕೋಟಿ ರುಪಾಯಿಗಳಿಂದ 40,000 ಕೋಟಿ ರುಪಾಯಿಗೆ ಇಳಿಯಬಹುದು ಎನ್ನುತ್ತಾರೆ ನಿತಿನ್‌ ಕಾಮತ್.‌

ಒಂದಂತೂ ನಿಜ, 1986ರಿಂದ 2024ರ ತನಕ ಭಾರತೀಯ ಸ್ಟಾಕ್‌ ಮಾರ್ಕೆಟ್‌ ಇತಿಹಾಸವನ್ನು ಗಮನಿಸಿದರೆ, ಈಗ ಉಂಟಾಗಿರುವ 13% ಕರೆಕ್ಷನ್‌ ದೊಡ್ಡದಲ್ಲ.1986ರಲ್ಲಿ ವಿತ್ತೀಯ ಕೊರತೆ ತೀವ್ರವಾಗಿ ಸ್ಟಾಕ್‌ ಮಾರ್ಕೆಟ್‌ ಮೈನಸ್‌ 41% ಕುಸಿದಿತ್ತು. 1991ರಲ್ಲಿ ಬ್ಯಾಲೆನ್ಸ್‌ ಆಫ್‌ ಪೇಮೆಂಟ್‌ ಬಿಕ್ಕಟ್ಟು ಉಂಟಾಗಿ ಮೈನಸ್‌ 39% ಕುಸಿದಿತ್ತು. 1996ರಲ್ಲಿ ಹರ್ಷದ್‌ ಮೆಹ್ತಾ ಹಗರಣದ ಸಂದರ್ಭ ಮೈನಸ್‌ 54 % ಕುಸಿದಿತ್ತು. 2000ರಲ್ಲಿ ಡಾಟ್‌ ಕಾಮ್‌ ವಿವಾದದಿಂದ ಮೈನಸ್‌ 56%, 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಸ್ಟಾಕ್‌ ಇಂಡೆಕ್ಸ್‌ 61% ಕುಸಿತಕ್ಕೀಡಾಗಿತ್ತು. ಇತ್ತೀಚೆಗೆ ಅಂದ್ರೆ ಕೋವಿಡ್‌ ಸಂದರ್ಭ ಸ್ಟಾಕ್‌ ಮಾರುಕಟ್ಟೆ ಮೈನಸ್‌ 38% ಕುಸಿದಿತ್ತು.

ತಜ್ಞರ ಪ್ರಕಾರ ಲಾರ್ಜ್‌ ಕ್ಯಾಪ್‌ ಅಥವಾ ಮಲ್ಟಿ ಕ್ಯಾಪ್‌, ಫ್ಲೆಕ್ಸಿ ಕ್ಯಾಪ್ ಫಂಡ್‌ಗಳಲ್ಲಿ SIP ಹೂಡಿಕೆಯನ್ನು ಮುಂದುವರಿಸುವುದು ಉತ್ತಮ. ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಕನಿಷ್ಠ 4 ವರ್ಷಗಳ ಅವಧಿಗೆ ಹೂಡಿಕೆ ಮುಂದುವರಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳ ಅನುಕೂಲ ಏನೆಂದರೆ, ಇಲ್ಲಿ ನಿಮ್ಮ ಪರವಾಗಿ ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಲಾಂಗ್‌ ಟರ್ಮ್‌ಗೆ ಹೂಡಿಕೆ ಮಾಡುವವರು ನಿರ್ದಿಷ್ಟ ಗುರಿ ಸಾಧನೆಯ ಸಲುವಾಗಿ ಹೂಡಿಕೆಯನ್ನು ಮುಂದುವರಿಸುತ್ತಾರೆ. ಅವರು ಮಾರುಕಟ್ಟೆಯ ತಾತ್ಕಾಲೀನ ಏರಿಳಿತಗಳ ಬಗ್ಗೆ ಅವರು ಚಿಂತೆ ಮಾಡುವುದಿಲ್ಲ. ಎಸ್‌ಐಪಿ ಮೂಲಕ ಹೂಡಿಕೆಗೊಂದು ಶಿಸ್ತು ಬದ್ಧತೆ ಬರುತ್ತದೆ ಎನ್ನುತ್ತಾರೆ ಫೈನಾನ್ಷಿಯಲ್‌ ರೇಡಿಯನ್ಸ್‌ ಸಂಸ್ಥೆಯ ಸ್ಥಾಪಕ ರಾಜೇಶ್‌ ಮೈನೋಚ.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಮಾರುಕಟ್ಟೆಯ ವೊಲಾಟಿಲಿಟಿ ಪ್ರೂಫ್‌ ಪೋರ್ಟ್‌ ಪೋಲಿಯೊ ಮಾಡಿಕೊಳ್ಳಲು ಗಮನ ಹರಿಸಬೇಕು. ಮಾರುಕಟ್ಟೆಯಲ್ಲಿ ಕರೆಕ್ಷನ್‌ ನಡೆಯುತ್ತಿರುವುದರಿಂದ ಫಂಡ್‌ ಮ್ಯಾನೇಜರ್‌ಗಳು ಫಂಡಮೆಂಟಲ್‌ ಆಗಿ ಚೆನ್ನಾಗಿರುವ ಕಂಪನಿಗಳ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಆನಂದ್‌ ರಾತಿ ವೆಲ್ತ್‌ ಸಂಸ್ಥೆಯ ಡೆಪ್ಯುಟಿ ಸಿಇಒ ಫಿರೋಜ್‌ ಅಜೀಜ್. ಆದ್ದರಿಂದ ನಾವೆಲ್ಲರೂ ಒಂದು ಅಂಶವನ್ನು ತಿಳಿಯಬೇಕು. ಇಕಾನಮಿ ಡೈನಾಮಿಕ್‌ ಆಗಿರುತ್ತದೆ. ಇಲ್ಲಿ ಏರಿಳಿತಗಳು ಸಹಜ. ಮಾರುಕಟ್ಟೆಯ ಸೂಚ್ಯಂಕಗಳು ನೇರ ಲೈನ್‌ ಎಳೆದಂತೆ ಇರುವುದಿಲ್ಲ. ಆದರೆ ದೀರ್ಘಕಾಲೀನವಾಗಿ ನೋಡಿದರೆ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭವೂ ಆಗಿದೆ. ಹೀಗಾಗಿ ಮಾರುಕಟ್ಟೆ ಸೂಚ್ಯಂಕ ಕುಸಿದರೆ ಲಾಂಗ್‌ ಟರ್ಮ್‌ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಸುವರ್ಣಾವಕಾಶ.

ಈ ಸುದ್ದಿಯನ್ನೂ ಓದಿ: GST Collection: ಫೆಬ್ರವರಿಯ ಜಿಎಸ್‌ಟಿ ಕಲೆಕ್ಷನ್‌ ಶೇ. 9.1ರಷ್ಟು ಏರಿಕೆ

ಕಾಫಿ ಡೇ ಎಂಟರ್‌ಪ್ರೈಸಸ್‌ (ಸಿಡಿಇಎಲ್)‌ ಷೇರುಗಳ ದರದಲ್ಲಿ ಸೋಮವಾರ 20% ಏರಿಕೆ ದಾಖಲಾಯಿತು. ಕಂಪನಿಗಳ ಕಾನೂನು ಕುರಿತ ರಾಷ್ಟ್ರೀಯ ನ್ಯಾಯಾಧೀಕರಣವು ಕಾಫಿ ಡೇ ಎಂಟರ್‌ಪ್ರೈಸಸ್‌ ವಿರುದ್ಧದ ದಿವಾಳಿ ಪ್ರಕ್ರಿಯೆಯನ್ನು ತಡೆದಿರುವ ಹಿನ್ನೆಲೆಯಲ್ಲಿ ಕಾಫಿ ಡೇ ಷೇರುಗಳು 20% ಏರಿಕೆಯಾಯಿತು. 25 ರುಪಾಯಿ 65 ಪೈಸೆಗೆ ವೃದ್ಧಿಸಿತು.

ಐಡಿಬಿಐ ಟ್ರಸ್ಟೀಶಿಪ್‌ ಸರ್ವೀಸ್‌ ಲಿಮಿಟೆಡ್‌ ಸಂಸ್ಥೆಯು ಕಾಫಿ ಡೇ ವಿರುದ್ಧ 228 ಕೋಟಿ ರುಪಾಯಿ ಬಾಕಿಗೆ ಸಂಬಂಧಿಸಿ ದಿವಾಳಿ ಪ್ರಕ್ರಿಯೆಯನ್ನು ಕೋರಿತ್ತು. ಇದಕ್ಕೆ ಸಂಬಂಧಿಸಿ ಎನ್‌ಸಿಎಲ್‌ಎಟಿಯು 2024ರ ಆಗಸ್ಟ್‌ನಲ್ಲಿ ಅರ್ಜಿಯನ್ನು ಪರಿಗಣಿಸಿತ್ತು. ಆದರೆ ಎನ್‌ಸಿಎಲ್‌ಎಟಿಯ ಚೆನ್ನೈ ಪೀಠವು ತಡೆ ಹಿಡಿದಿದೆ. ಈ ಆದೇಶದಿಂದ ಕಾಫಿ ಡೇ ಕಂಪನಿಗೆ ನಿರಾಳವಾಗಿದೆ.