Friday, 20th September 2024

1984 anti-Sikh riots: ಸಿಖ್‌ ವಿರೋಧಿ ದಂಗೆ- 4 ದಶಕ ಕಳೆದರೂ ಮುಗಿದಿಲ್ಲ ಕಾನೂನು ಸಮರ- ಕೋರ್ಟ್‌ ಕದ ತಟ್ಟಿದ ಕಾಂಗ್ರೆಸ್‌ ನಾಯಕ

1984 Anti-Sikh Riots

ನವದೆಹಲಿ: 1984ರ ದೆಹಲಿಯ ಸಿಖ್‌ ವಿರೋಧಿ ದಂಗೆ(1984 anti-Sikh riots) ವೇಳೆ ನಡೆದ ಕೊಲೆ ಮತ್ತು ದುಷ್ಕೃತ್ಯ ಪ್ರಕರಣಗಳಲ್ಲಿ ತಮ್ಮನ್ನು ನಿರ್ದೋಷಿ ಎಂದು ಘೋಷಿಸುವಂತೆ ಕೋರಿ ಕಾಂಗ್ರೆಸ್‌ ಹಿರಿಯ ನಾಯಕ ಜಗದೀಶ್‌ ಟೈಟ್ಲರ್‌(Jagdish Tytler) ದಿಲ್ಲಿ ವಿಶೇಷ ಕೋರ್ಟ್‌(Delhi’s Rouse Avenue Court)ಗೆ ಮೆಟ್ಟಿಲೇರಿದ್ದಾರೆ. ದೆಹಲಿಯ ಪುಲ್‌ ಬಂಗಾಶ್‌ ಗುರುದ್ವಾರದಲ್ಲಿ ಮೂವರು ವ್ಯಕ್ತಿಗಳನ್ನು ಬರ್ಬರವಾಗಿ ಕೊಲೆಗೈದಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ವಿಶೇಷ ನ್ಯಾಯಾಧೀಶ ರಾಕೇಶ್‌ ಸಾಯಲ್‌ ಇದ್ದ ನ್ಯಾಯಪೀಠದ ಎದುರು ಜಗದೀಶ್‌ ಟೈಟ್ಲರ್‌ ಇಂದು ವಿಚಾರಣೆಗೆ ಹಾಜರಾಗಿ ತಮ್ಮನ್ನು ನಿರ್ದೋಷಿ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ಕೋರ್ಟ್‌ ಅಕ್ಟೋಬರ್‌ 3ರಂದು ವಿಚಾರಣಾ ದಿನಾಂಕವನ್ನು ನಿಗದಿಪಡಿಸಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು 1984 ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಜಗದೀಶ್‌ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ವಿಧಿಗಳಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸಿಬಿಐಗೆ ಆ.30ರಂದು ಸೂಚನೆ ನೀಡಿತ್ತು.

ರಾಷ್ಟ್ರ ರಾಜಧಾನಿಯ ಪುಲ್ ಬಂಗಾಶ್ ಪ್ರದೇಶದಲ್ಲಿ 1984 ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಜಗದೀಶ್ ಟೈಟ್ಲರ್ ಅವರು ಉದ್ರಿಕ್ತ ಗುಂಪನ್ನು ಪ್ರಚೋದಿಸುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಇದರ ಪರಿಣಾಮವಾಗಿ ಮೂವರ ಕಗ್ಗೊಲೆಯಾಗಿತ್ತು ಎಂದು ಸಿಬಿಐ ಜನವರಿ 2024ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಟೈಟ್ಲರ್‌ ಅವರಿಗೆ ಕೋರ್ಟ್‌ ಒಂದು ಲಕ್ಷ ಬಾಂಡ್‌ ಮೇಲೆ ಷರತ್ತುಬದ್ಧ ಜಾಮೀನು ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ನಾಶ ಮಾಡದಂತೆ ಮತ್ತು ಅನುಮತಿ ಇಲ್ಲದೇ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿತ್ತು.

ಏನಿದು ಪ್ರಕರಣ?

1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್‌ ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ದೆಹಲಿಯಲ್ಲಿ ಸಿಖ್‌ ವಿರೋಧಿ ದಂಗೆ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಸಿಖ್‌ ಸಮುದಾಯದ ಜನರನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಇದೇ ಸಂದರ್ಭದಲ್ಲಿ ಪುಲ್‌ ಬಂಗಾಶ್‌ ಪ್ರದೇಶದಲ್ಲಿ ಗುರುದ್ವಾರಕ್ಕೆ ಬೆಂಕಿ ಹಚ್ಚಿ ಉದ್ರಿಕ್ತ ಗುಂಪು ಅಟ್ಟಹಾಸ ಮೆರೆದಿತ್ತು. ಘಟನೆಯಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನೂ ಓದಿ: SC verdict on Kejriwal bail: ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ- ಕೇಜ್ರಿವಾಲ್‌ಗೆ ಕೋರ್ಟ್‌ ವಿಧಿಸಿರುವ ಆ ಐದು ಷರತ್ತುಗಳೇನು?