Wednesday, 11th December 2024

2014ರ ಲೈಂಗಿಕ ಕಿರುಕುಳ ಪ್ರಕರಣ: ನ್ಯಾಯಾಧೀಶೆಯ ಮರುಸೇರ್ಪಡೆಗೆ ಆದೇಶ

#madhyapradesh

ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ(2014 ರಲ್ಲಿ) ದ ಆರೋಪ ಹೊರಿಸಿ ರಾಜೀನಾಮೆ ನೀಡಿದ ನ್ಯಾಯಾಧೀಶೆಯನ್ನು ಮರುಸೇರ್ಪಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

2014ರಲ್ಲಿ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿತ್ತು ಎಂಬ ಕಾರಣಕ್ಕೆ ಮಹಿಳಾ ನ್ಯಾಯಾಧೀಶರು ಮರು ಸೇರ್ಪಡೆ ಕೋರಿದ್ದರು.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ. ಆರ್ .ಗವಾಯಿ ಅವರನ್ನೊಳಗೊಂಡ ಪೀಠ, ನ್ಯಾಯಾಧೀಶೆಯ ರಾಜೀನಾಮೆಯನ್ನು ಅಂಗೀಕರಿಸಿದ ಆದೇಶವನ್ನು ರದ್ದುಗೊಳಿಸಿತು. ಮಧ್ಯಪ್ರದೇಶದ ನ್ಯಾಯಾಂಗದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಅವರನ್ನು ಮರುನೇಮಕ ಗೊಳಿಸುವಂತೆ ನಿರ್ದೇ ಶಿಸಿತು. ಆದಾಗ್ಯೂ, ರಜೆ ಅವಧಿಯ ವೇತನ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಜುಲೈ 2014 ರಲ್ಲಿ ನ್ಯಾಯಾಧೀಶೆ ತನಗಾಗಿರುವ ಲೈಂಗಿಕ ಕಿರುಕುಳವನ್ನು ವಿವರಿಸಿ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದರು. ನಂತರ ಗ್ವಾಲಿಯರ್‌ನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವಂತೆ ಹೈಕೋರ್ಟ್ ನ್ಯಾಯಾಧೀಶರು ನನಗೆ ಹೇಳಿದ್ದಾರೆ ಎಂದು ಪತ್ರದಲ್ಲಿ ದೂರಿದ್ದರು. ದೂರದ ಸ್ಥಳಕ್ಕೆ ತನ್ನ ವರ್ಗಾವಣೆಗೆ ನ್ಯಾಯಾಧೀಶರು ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪಗಳ ತನಿಖೆ ನಡೆಸಿದ ರಾಜ್ಯಸಭೆ ನೇಮಿಸಿದ ಸಮಿತಿಯು ಹೈಕೋರ್ಟ್ ನ್ಯಾಯಾಧೀಶರಿಗೆ ಕ್ಲೀನ್ ಚಿಟ್ ನೀಡಿತ್ತು.