ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 22,842 ಹೊಸ ಕೋವಿಡ್ ಪ್ರಕರಣ ಗಳು ಪತ್ತೆಯಾಗಿದ್ದು, 13,217 ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗಿದೆ.
ಶನಿವಾರಕ್ಕಿಂತ ಶೇ.6.2 ರಷ್ಟು ಕಡಿಮೆ ಪ್ರಕರಣಗಳು ಭಾನುವಾರ ವರದಿಯಾಗಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 3,38,13,903ಕ್ಕೆ ಏರಿಕೆಯಾಗಿದೆ. ಶನಿವಾರ 24,354 ಪ್ರಕರಣ ಗಳು ವರದಿಯಾಗಿತ್ತು. ಇದು ಶುಕ್ರವಾರದಿಂದ ಶೇ.8.9 ರಷ್ಟು ಕಡಿಮೆಯಾಗಿತ್ತು.
ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 244 ಮಂದಿ ಕೋವಿಡ್ 19 ಸೋಂಕಿತರು ಅಸು ನೀಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 4,48,817ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.
ದೇಶದ ಐದು ರಾಜ್ಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ಕೇರಳದಲ್ಲಿ 13,217 ಪ್ರಕರಣಗಳು, ಮಹಾ ರಾಷ್ಟ್ರ ದಲ್ಲಿ 2,696 ಪ್ರಕರಣಗಳು, ತಮಿಳುನಾಡಿನಲ್ಲಿ 1,578 ಪ್ರಕರಣಗಳು, ಮಿಜೋರಾಂನಲ್ಲಿ 1,276 ಪ್ರಕರಣಗಳು ಮತ್ತು ಆಂಧ್ರ ಪ್ರದೇಶ ರಾಜ್ಯದಲ್ಲಿ 865 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಈ ಐದು ರಾಜ್ಯಗಳಿಂದ ಶೇ.85.95 ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ, ಹೊಸ ಪ್ರಕರಣಗಳಲ್ಲಿ ಕೇರಳವೊಂದೇ ಶೇ 57.86 ರಷ್ಟು ಸೋಂಕು ಪ್ರಕರಣಗಳಿಗೆ ಕಾರಣವಾಗಿದೆ.