Sunday, 3rd November 2024

5ಜಿ ಹರಾಜು ಗೆಲ್ಲಲು ಅಂಬಾನಿ -ಅದಾನಿ ಸ್ಪರ್ಧೆ ಆರಂಭ

ನವದೆಹಲಿ: ಡಿಜಿಟಲ್ ಯುಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದಕ್ಕೆ ದೇಶದ ಕೋಟ್ಯಧಿಪತಿಗಳು ಎನಿಸಿರುವ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅತಿ ಹೆಚ್ಚು ಪೂರ್ವ-ಹರಾಜು ಠೇವಣಿ ಪಾವತಿಸಿದೆ. ಮಂಗಳವಾರ ಪ್ರಾರಂಭ ವಾಗುವ ಮಾರಾಟದಲ್ಲಿ ಅತ್ಯಂತ ಆಕ್ರಮಣಕಾರಿ ಬಿಡ್‌ದಾರರಾಗುವ ಸಾಧ್ಯತೆ ಯಿದೆ. ಪ್ರತಿಸ್ಪರ್ಧಿ ಆಗಿ ಅದಾನಿ ಡಾಟಾ ನೆಟ್‌ವರ್ಕ್ಸ್ ಲಿಮಿಟೆಡ್ ಪ್ರವೇಶ ಮಾಡಿರುವುದು ಆಶ್ಚರ್ಯ ಹುಟ್ಟಿಸಿದೆ.

ಬಿಲಿಯನೇರ್ ಸುನಿಲ್ ಮಿತ್ತಲ್ ನೇತೃತ್ವದ ವೈರ್‌ಲೆಸ್ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ವೊಡಾ ಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಕುಮಾರ್ ಮಂಗಲಂ ಬಿರ್ಲಾ ತಂಡವು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರಮುಖ ಬಿಡ್‌ದಾರರಾಗಿದ್ದಾರೆ. ತರಂಗಾಂತರ ಮಾರಾಟವು 1.1 ಟ್ರಿಲಿಯನ್ ರೂಪಾಯಿ ಅನ್ನು ($14 ಶತ ಕೋಟಿ) ಸಂಗ್ರಹಿಸಬಹುದು.

2022ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಅಂಬಾನಿಯನ್ನು ಹಿಂದಿ ಕ್ಕಿದ ಅದಾನಿ ಸಾಮ್ರಾಜ್ಯವು ಮತ್ತೊಂದು ಹೆಜ್ಜೆ ಮುಂದಿಡುವುದಕ್ಕೆ ಸಿದ್ಧವಾಗಿದೆ.

5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಮಂಗಳವಾರ ಬೆಳಿಗ್ಗೆ 10 ಗಂಟೆ ಯಿಂದಲೇ ಪ್ರಾರಂಭವಾಗಿದೆ. ಟೆಲಿಕಾಂ ಇಲಾಖೆ ಮೂಲಗಳ ಪ್ರಕಾರ, ಹರಾಜಿನ ಉದ್ದವು ರೇಡಿಯೊ ವೇವ್‌ಗಳ ನಿಜವಾದ ಬೇಡಿಕೆ ಮತ್ತು ವೈಯಕ್ತಿಕ ಬಿಡ್‌ದಾರರು ಬಳಸುವ ತಂತ್ರಗಳ ಮೇಲೆ ಅವಲಂಬಿತವಾಗಿರುತ್ತದೆ.