ಚೆನ್ನೈ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕಾರ್ಯ ನಿರ್ವಹಿಸುತ್ತಿರುವ ತಮಿಳುನಾಡು ಪೊಲೀಸರಿಗೆ ತಮಿಳುನಾಡು ಸರ್ಕಾರ 5,000 ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.
ಗುರುವಾರ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೊವಿಡ್-19 ಕರ್ತವ್ಯದಲ್ಲಿ ತೊಡಗಿರುವ ಪೊಲೀಸರಿಗೆ ಸರ್ಕಾರದ ವತಿಯಿಂದ 5,000 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕರೋನಾವೈರಸ್ ಭೀತಿ ನಡುವೆಯೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಭದ್ರತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪೊಲೀಸರ ಆರೋಗ್ಯದ ದೃಷ್ಟಿಯಿಂದ ಬಹುಪಾಲು ಆರಕ್ಷಕರಿಗೆ ಕೊವಿಡ್-19 ಲಸಿಕೆ ವಿತರಿಸ ಲಾಗಿದೆ.
ರಾಜ್ಯದಲ್ಲಿ ಒಂದೇ ದಿನ 25,317 ಮಂದಿಗೆ ಕರೋನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 483 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 25,205ಕ್ಕೆ ಏರಿಕೆಯಾಗಿದೆ.