Sunday, 15th December 2024

6G Race: 6ಜಿ ರೇಸ್‌ನಲ್ಲಿ ಭಾರತಕ್ಕೆ ಮುನ್ನಡೆ; ಜಾಗತಿಕ ಪೇಟೆಂಟ್ ಫೈಲಿಂಗ್‌ನಲ್ಲಿ 6ನೇ ರ‍್ಯಾಂಕ್‌

6G Race

ನವದೆಹಲಿ: ದಾಖಲೆಯ ಸಮಯದಲ್ಲಿ ದೇಶಾದ್ಯಂತ 5 ಜಿ (5 G)ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಭಾರತವು ಇದೀಗ 6 ಜಿ (6G Race) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಮುಂದಡಿ ಇಟ್ಟಿದೆ. 6 ಜಿಗೆ ಸಂಬಂಧಿಸಿದ ಪೇಟೆಂಟ್‌ (Patent filings)ಗಳನ್ನು ಸಲ್ಲಿಸಿದ ದೇಶಗಳ ಪೈಕಿ ಅಗ್ರ 6ನೇ ರ‍್ಯಾಂಕ್‌ ಪಡೆದುಕೊಂಡಿದೆ ಎಂದು ಅಧ್ಯಯನಗಳು ತಿಳಿಸಿವೆ.

ಅಕ್ಟೋಬರ್ 14ರಿಂದ 24ರವರೆಗೆ ದಿಲ್ಲಿಯಲ್ಲಿ ವರ್ಲ್ಡ್‌ ಟೆಲಿಕಮ್ಯುನಿಕೇಷನ್ಸ್‌ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ (World Telecommunications Standardisation Assembly-WTSA) ನಡೆಯಲಿದೆ. ಇದು 6 ಜಿ, ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾದಂತಹ ನಿರ್ಣಾಯಕ ತಂತ್ರಜ್ಞಾನಗಳ ಭವಿಷ್ಯದ ಮಾನದಂಡಗಳ ಬಗ್ಗೆ ಚರ್ಚಿಸಲು 190 ದೇಶಗಳ ಪ್ರತಿನಿಧಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಈ ಸಮ್ಮೇಳನ ನಡೆಯುತ್ತಿದೆ.

ʼʼಜಾಗತಿಕ 6 ಜಿ ಪೇಟೆಂಟ್ ಫೈಲಿಂಗ್‌ಗಳಲ್ಲಿ ಭಾರತ ಈಗ ಅಗ್ರ ಸ್ಥಾನದಲ್ಲಿದೆ. 2030ರ ವೇಳೆಗೆ 6 ಜಿ ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಭಾರತವು ಮುಂಚೂಣಿ ಕೊಡುಗೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆʼʼ ಎಂಬುದಾಗಿ ಮೂಲಗಳು ತಿಳಿಸಿವೆ.

‘ಭಾರತ್ 6 ಜಿ ವಿಷನ್’ ಅಡಿಯಲ್ಲಿ ಸರ್ಕಾರ ಈಗಾಗಲೇ ‘6 ಜಿ ಪರಿಸರ ವ್ಯವಸ್ಥೆಯ ಮೇಲೆ ವೇಗವರ್ಧಿತ ಸಂಶೋಧನೆ’ ಕುರಿತು 470 ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡುತ್ತಿದೆ. ದೂರಸಂಪರ್ಕ ಇಲಾಖೆ (DoT) 6 ಜಿ ಸಂಶೋಧನೆಯನ್ನು ಮುನ್ನಡೆಸಲು ಈಗಾಗಲೇ ಧನ ಸಹಾಯ ಮಾಡಿದೆ. ಸರ್ಕಾರದ ನೇತೃತ್ವದ ಸಮಿತಿಯ ಪ್ರಕಾರ, ಮುಂದಿನ 3 ವರ್ಷಗಳಲ್ಲಿ ಭಾರತವು ಎಲ್ಲ 6 ಜಿ ಪೇಟೆಂಟ್‌ಗಳ ಪೈಕಿ ಶೇ. 10ರಷ್ಟು ಪಾಲನ್ನು ಹೊಂದಲಿದೆ. ದೇಶವು ಈಗಾಗಲೇ ‘ಭಾರತ್ 6 ಜಿ ವಿಷನ್’ ಮತ್ತು ‘ಭಾರತ್ 6 ಜಿ ಅಲೈಯನ್ಸ್’ನಂತಹ ವಿವಿಧ ಉಪಕ್ರಮಗಳನ್ನು ಪ್ರಾರಂಭಿಸಿದೆ.

ಅಕ್ಟೋಬರ್ 24ರವರೆಗೆ ದಿಲ್ಲಿಯಲ್ಲಿ ನಡೆಯಲಿರುವ 10 ದಿನಗಳ ವಿಶ್ವ ಟೆಲಿಕಾಂ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿಯಲ್ಲಿ 190ಕ್ಕೂ ಹೆಚ್ಚು ದೇಶಗಳ ವಿಶ್ವ ಟೆಲಿಕಾಂ ನಾಯಕರು, ತಜ್ಞರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು)ದ 150 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಕ್ಟೋಬರ್ ಭಾರತದಲ್ಲಿ ‘ಡಬ್ಲ್ಯುಟಿಎಸ್ಎ 2024’ ನಡೆಯುತ್ತಿದೆ.

2028ರಲ್ಲಿ ದಕ್ಷಿಣ ಕೊರಿಯಾದಲ್ಲಿ 6G ತಂತ್ರಜ್ಞಾನ

ನಿಗದಿಗೆ ಎರಡು ವರ್ಷ ಮುಂಚಿತವಾಗಿಯೇ 6ಜಿ ನೆಟ್​ವರ್ಕ್​ ಸೇವೆಯನ್ನು 2028ರಲ್ಲಿ ಪ್ರಾರಂಭಿಸಲು ದಕ್ಷಿಣ ಕೊರಿಯಾ ಈಗಾಗಲೇ ಯೋಜನೆ ರೂಪಿಸಿದೆ. ಭವಿಷ್ಯದ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಸಲು ಈಗಾಗಲೇ ಪ್ರಯತ್ನ ಆರಂಭಿಸಿದೆ. ಏಷ್ಯಾದ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದಕ್ಷಿಣ ಕೊರಿಯಾ ಕಳೆದ ವರ್ಷ 5ಜಿ ಪೇಟೆಂಟ್‌ಗಳ ಸಂಖ್ಯೆಯಲ್ಲಿ ಶೇ. 25.9ರಷ್ಟು ಭಾಗ ಹೊಂದಿತ್ತು. ಚೀನಾ ಶೇ. 26.8ರಷ್ಟು ಹೊಂದಿತ್ತು. ಮುಂಬರುವ 6ಜಿ ನೆಟ್‌ವರ್ಕ್ ಪೇಟೆಂಟ್ ಸ್ಪರ್ಧೆಯಲ್ಲಿ ಶೇ. 30ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆ ತಲುಪುವ ಗುರಿಯನ್ನು ದಕ್ಷಿಣ ಕೊರಿಯಾ ಹೊಂದಿದೆ.

ಈ ಸುದ್ದಿಯನ್ನೂ ಓದಿ: Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ