Friday, 22nd November 2024

ಸುಂಕಿ ಔಟ್​ಪೋಸ್ಟ್​ನಲ್ಲಿ 7.9 ಕೋಟಿ ರೂ. ಮೌಲ್ಯದ ನಕಲಿ ಕರೆನ್ಸಿ ವಶ: ಇಬ್ಬರ ಬಂಧನ

ವಿಶಾಖಪಟ್ಟಣಂ: ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಆರೋಪದ ಮೇಲೆ ಇಬ್ಬರು ಆರೋಪಿ ಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್​ಪೋಸ್ಟ್​ನಲ್ಲಿ ಬಂಧಿಸಲಾಗಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಅಂತಾರಾಜ್ಯ ದಂಧೆಕೋರರು ಎಂಬುದಾಗಿ ತಿಳಿದುಬಂದಿದೆ. ಛತ್ತೀಸ್​ಗದ ರಾಯ್ಪುರದಿಂದ ಆಂಧ್ರದ ವಿಶಾಖ ಪಟ್ಟಣಂ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುಂಕಿ ಔಟ್​ಪೋಸ್ಟ್​ನಲ್ಲಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದಾಗ 500 ರೂ. ನೋಟಿನ ಕಂತೆಗಳ ಒಟ್ಟು 7.9 ಕೋಟಿ ರೂ. ನಕಲಿ ಹಣ ಪತ್ತೆಯಾಗಿದೆ.

ಆಂಧ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಹ ಘೋಷಣೆಯಾಗಿದ್ದು, ಮಾರ್ಚ್​ 10ರಂದು ಮತದಾನ ನಡೆಯಲಿದೆ. ಇದರ ಬೆನ್ನಲ್ಲೇ ನಕಲಿ ಹಣ ಪತ್ತೆಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಆಂಧ್ರ, ಛತ್ತೀಸ್​ಗಢ ಮತ್ತು ಒಡಿಶಾ ಮೂರು ರಾಜ್ಯಗಳ ಪೊಲೀಸರು ತಂಡವೊಂದನ್ನು ರಚಿಸಿ ಗ್ಯಾಂಗ್​ನ ಉಳಿದ ಸದಸ್ಯರಿಗಾಗಿ ಬಲೆ ಬೀಸಿದೆ.