ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಕಾಣಿಸಿಕೊಂಡಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ತಿಳಿಸಿವೆ. ಅರ್ನಿಯಾ ಗಡಿ ಪ್ರದೇಶದಲ್ಲಿ ಈ ಡ್ರೋನ್ ಪತ್ತೆಯಾಗಿದೆ.
ಡ್ರೋನ್ ಕಂಡ ತಕ್ಷಣ ನಮ್ಮ ಗಡಿ ಭದ್ರತಾ ಯೋಧರು ಫೈರಿಂಗ್ ಆರಂಭಿಸಿದ್ದು, ಕೂಡಲೇ ಡ್ರೋನ್ ಪಾಕಿಸ್ತಾನದತ್ತ ಮರಳಿದೆ.
ಕಳೆದ ವಾರವಷ್ಟೇ ಗಡಿ ನಿಯಂತ್ರಣ ರೇಖೆ ಬಳಿ ಇಂಥದ್ದೇ ಒಂದು ಹಾರುವ ವಸ್ತು ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್ ಬಳಿ ಕಾಣಿಸಿಕೊಂಡಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇರನ್ ಸೆಕ್ಟರ್ ಬಳಿ ಕಾಣಿಸಿಕೊಂಡಿದ್ದ ಪಾಕಿಸ್ತಾನ ಸೇನೆಯ ಕ್ವಾಡ್ ಕಾಪ್ಟರ್‌ವೊಂದನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.