Monday, 23rd December 2024

AAP Candidate List: ಆಪ್‌ ಅಭ್ಯರ್ಥಿ ಪಟ್ಟಿ ರಿಲೀಸ್‌; ಮನೀಶ್‌ ಸಿಸೋಡಿಯಾ ಕ್ಷೇತ್ರ ಬದಲಾವಣೆ

manish sisodia

ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (AAP) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ(AAP Candidate List)ಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡಿದ್ದ ಶಿಕ್ಷಣ ತಜ್ಞ ಅವಧ್‌ ಓಜಾ ಅವರನ್ನು ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರ ಕ್ಷೇತ್ರವಾಗಿರುವ ಪತ್ಪರ್‌ಗಂಜ್‌ನಿಂದ ಕಣಕ್ಕಿಳಿಸಿದೆ. ಇನ್ನು ಈ ಬಾರಿ ಮನೀಶ್‌ ಸಿಸೋಡಿಯಾ(Manish Sisodia) ಅವರು ಜಂಗ್ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪತ್ಪರ್‌ಗಂಜ್‌ ಕ್ಷೇತ್ರದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು 2013 ಮತ್ತು 2015 ರಲ್ಲಿ ಸ್ಪರ್ಧಿಸಿ ಪ್ರಬಲ ಗೆಲುವುಗಳನ್ನು ದಾಖಲಿಸಿದ್ದರು. ಆದರೆ 2020ರಲ್ಲಿ ಮಾತ್ರ ಅಲ್ಪ ಗೆಲುವು ಸಾಧಿಸಲು ಸಾಧ್ಯವಾಯಿತು. ಇದೀಗ ಅವರು ಈ ಬಾರಿ ಹೊಸ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ. ಏತನ್ಮಧ್ಯೆ, ಪಟ್ಟಿಯಲ್ಲಿ ಎರಡನೇ ದೊಡ್ಡ ಎಎಪಿ ಹೆಸರು ರಾಖಿ ಬಿದ್ಲಾನ್. ದೆಹಲಿ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ಬಿದ್ಲಾನ್‌ ಅವರು ಮಂಗೋಲ್ಪುರಿ ಸ್ಥಾನಕ್ಕೆ ಬದಲಾಗಿ ಅವರು ಮಾದಿಪುರದಿಂದ ಸ್ಪರ್ಧಿಸಲಿದ್ದಾರೆ. ಇನ್ನು ಮಂಗೋಲ್ಪುರಿಯಿಂದ ರಾಕೇಶ್ ಜಾತವ್ ಧರ್ಮರಕ್ಷಕ್ ಅವರನ್ನು ಪಕ್ಷ ಕಣ‍‍‍ಕ್ಕಿಳಿಸಿದೆ.

ಪಟ್ಟಿಯಲ್ಲಿರುವ ಇತರ ಹೆಸರುಗಳು: ನರೇಲಾದಿಂದ ದಿನೇಶ್ ಭಾರದ್ವಾಜ್, ಸುರೇಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್‌ಪುರ್), ಮುಖೇಶ್ ಗೋಯೆಲ್ (ಆದರ್ಶ ನಗರ), ಜಸ್ಬೀರ್ ಕರಾಲಾ (ಮುಂಡ್ಕಾ), ಪ್ರದೀಪ್ ಮಿತ್ತಲ್ (ರೋಹಿಣಿ), ಪುರಂದೀಪ್ ಸಿಂಗ್ ಸಾವ್ನಿ (ಚಾಂದಿನಿ ಚೌಕ್), ಪರ್ವೇಶ್ ರತನ್ (ಪಟೇಲ್ ನಗರ), ಪ್ರವೀಣ್ ಕುಮಾರ್ (ಜನಕಪುರಿ), ಸುರೇಂದರ್ ಭಾರದ್ವಾಜ್ (ಬಿಜಸ್ವಾನ್), ಜೋಗಿಂದರ್ ಸೋಲಂಕಿ (ಪಾಲಂ), ಪ್ರೇಮ್ ಕುಮಾರ್ ಚೌಹಾಣ್ (ಡಿಯೋಲಿ), ಅಂಜನಾ ಪರ್ಚಾ (ತ್ರಿಲೋಕಪುರಿ), ವಿಕಾಸ್ ಬಗ್ಗಾ (ಕೃಷ್ಣ ನಗರ), ನವೀನ್ ಚೌಧರಿ (ಗಾಂಧಿ ನಗರ), ಜಿತೇಂದರ್ ಸಿಂಗ್ ಶುಂಟಿ (ಶಹದಾರ), ಮತ್ತು ಆದಿಲ್ ಅಹ್ಮದ್ ಖಾನ್ (ಮುಸ್ತಫಾಬಾದ್) ಕಣದಲ್ಲಿದ್ದಾರೆ. ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Arvind Kejriwal: ಕೇಜ್ರಿವಾಲ್‌ ಹತ್ಯೆಗೆ ಭಾರೀ ಸಂಚು? ಆಪ್‌ ಆರೋಪಕ್ಕೆ ಬಿಜೆಪಿ ಕೆಂಡಾಮಂಡಲ