Sunday, 15th December 2024

ಅಮೆಜಾನ್’ನಲ್ಲಿ ಆಬಾರ್ಷನ್ ಕಿಟ್ ಮಾರಾಟ: ಎಫ್‌ಐಆರ್ ದಾಖಲು

ಮುಂಬೈ: ಅರ್ಹ ವೈದ್ಯರ ಶಿಫಾರಸು ಪತ್ರ ಇಲ್ಲದೇ ಆನ್‌ಲೈನ್‌ನಲ್ಲಿ ಆಬಾರ್ಷನ್ ಕಿಟ್ ಮಾರಾಟ ಮಾಡಿದ ಅಮೆಜಾನ್ ಕಂಪೆನಿ ವಿರುದ್ಧ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಎಫ್‌ಐಆರ್ ದಾಖಲಿಸಿದೆ.

ಗರ್ಭಪಾತಕ್ಕೆ ಸಾಮಾನ್ಯವಾಗಿ ಬಳಸಲಾಗುವ ಎಂಟಿಪಿ ಕಿಟ್ ಅನ್ನು ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಲಾಗುತ್ತಿರುವುದು ಕಂಡು ಬಂದಿತ್ತು. ಅಮೆಜಾನ್‌ನಲ್ಲಿ ಸ್ವತಃ ಎಂಟಿಪಿ ಕಿಟ್ ಆರ್ಡರ್ ಮಾಡಿ ತರಿಸಿಕೊಂಡು ಖಾತ್ರಿಯಾದ ಬಳಿಕ ಎಫ್‌ಐಆರ್ ಹಾಕಲಾಗಿದೆ.

ಎ-ಕೇರ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅಮೇಜಾನ್‌ನಲ್ಲಿ ಅಬಾರ್ಷನ್ ಕಿಟ್ ಮಾರ ಲಾಗುತ್ತಿತ್ತು. ಇದನ್ನು ಖರೀದಿಸುವಾಗ ಪ್ರಿಸ್‌ಕ್ರಿಪ್ಷನ್ ಕೇಳಲೇ ಇಲ್ಲ. ಅದಿಲ್ಲದೆ ಕಿಟ್ ಅನ್ನು ಡೆಲಿವರಿ ಮಾಡಲಾಯಿತು. ಈ ಕಿಟ್‌ನ ಪಾರ್ಸಲ್ ತಂದ ಕೊರಿಯರ್‌ನಲ್ಲಿ ಸೇಲ್ ಬಿಲ್ ಅನ್ನು ಒಳಗೊಂಡಿರಲಿಲ್ಲ.

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರವು ಇನ್ನಷ್ಟು ವಿಚಾರಣೆ ನಡೆಸಿದಾಗ ಔಷಧವನ್ನು ಒಡಿಶಾದಿಂದ ಸಪ್ಲೈ ಮಾಡಿರುವುದು ತಿಳಿದುಬಂದಿದೆ. ಎಂದರೆ ಮಾರಾಟಗಾರ ಒಡಿಶಾದವರಾಗಿದ್ದಾರೆ.

ಗರ್ಭಪಾತಕ್ಕೆ ಬಳಸುವ ಎಂಟಿಪಿ ಕಿಟ್ ಅನ್ನು 1940ರ ಡ್ರಗ್ಸ್ ಕಾಯ್ದೆ ಅಡಿ ಸ್ಕೆಡ್ಯೂಲ್ ಎಚ್ ಔಷಧ ವರ್ಗೀಕರಣಕ್ಕೆ ಸೇರಿಸಲಾಗಿದೆ. ಅರ್ಹ ವೈದ್ಯರ ಪ್ರಿಸ್‌ಕ್ರಿಪ್ಷನ್ ಇದ್ದರೆ ಮಾತ್ರ ಇದರ ಮಾರಾಟ ಮಾಡಬೇಕೆಂದು ನಿಯಮ ಇದೆ.