Thursday, 12th December 2024

ನಿಯಂತ್ರಣ ತಪ್ಪಿದ ಕಾರು ಟ್ರಕ್‌ಗೆ ಡಿಕ್ಕಿ: ಐದು ಮಂದಿ ಸಾವು

ರಾಂಪುರ: ಉತ್ತರ ಪ್ರದೇಶದ ರಾಂಪುರದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ.

ಚಾಲಕ ಸೇರಿ ಕಾರಿನಲ್ಲಿ 6 ಜನರು ಪ್ರಯಾಣ ಮಾಡುತ್ತಿದ್ದರು.  ಅಪಘಾತದಲ್ಲಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುಪಿ-ಉತ್ತರಾಖಂಡ್ ಗಡಿಯಲ್ಲಿರುವ ಸ್ವರ್ ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಕಾರಿನಲ್ಲಿ ಮೊರಾದಾಬಾದ್‌ನಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ.

ಎಸ್‌ಡಿಎಂ ರಾಜೇಶ್‌ಕುಮಾರ್‌ ಮಾತನಾಡಿ, ಶಿಕಂಪುರ ಎಂಬ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಸ್ಥಳದ ಸಮೀಪದಲ್ಲಿ ಒಂದು ಅಡ್ಡರಸ್ತೆ ಇದೆ. ಸ್ಪೀಡ್ ಬ್ರೇಕರ್ ಬಳಿಕ ಕಾರು ನಿಯಂತ್ರಣ ತಪ್ಪಿದೆ ಎಂದು ಶಂಕಿಸಲಾಗಿದೆ.

ಮೃತರನ್ನು ಮೊರಾದಾಬಾದ್‌ನ ಜಯಂತಿಪುರ ನಿವಾಸಿಗಳು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬಲಿಯಾದವರೆಲ್ಲರೂ ಇಕೋ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಟ್ರಕ್‌ನ ಬಗ್ಗೆಯೂ ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.