ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹೆಸರಾಂತ ಖಳ ನಟ ಮೇಘನಾಥನ್ (Actor Meghanathan) ವಿಧಿವಶರಾಗಿದ್ದಾರೆ. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೇಘನಾಥನ್ (60) ಗುರುವಾರ (ನ.21) ಕೋಳಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೇಘನಾಥನ್ ಮಲಯಾಳಂ ಚಿತ್ರರಂಗದ ಹಿರಿಯ ನಟರಾದ ಬಾಲನ್ ಕೆ ನಾಯರ್ ಅವರ ಮೂರನೇ ಪುತ್ರರಾಗಿದ್ದು,ತಮ್ಮ ಬಾಲ್ಯದ ದಿನಗಳನ್ನು ಚೆನ್ನೈನಲ್ಲಿ ಕಳೆದು ಶಿಕ್ಷಣವನ್ನೂ ಅಲ್ಲೇ ಪೂರ್ಣಗೊಳಿಸಿದ್ದರು. ನಂತರ ತಮ್ಮ ತಂದೆಯ ಹಾದಿಯನ್ನು ಹಿಡಿದು ಚಿತ್ರರಂಗದತ್ತ ಹೆಜ್ಜೆ ಹಾಕಿದ್ದರು. ʼಅಸ್ತ್ರಮ್ʼ ಸಿನಿಮಾದ ಮೂಲಕ 1983 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೇಘನಾಥನ್ ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಖಳ ನಾಯಕನಾಗಿಯೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಂಡ ಅವರು ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆಯ ಖಳ ನಾಯಕರಾಗಿ ಗುರುತಿಸಿಕೊಂಡಿದ್ದರು.
ʼಪಂಚಾಗ್ನಿʼ,ʼಚಮಯಂʼ,ʼರಾಜಧಾನಿʼ,ʼಭೂಮಿಗೀತಂʼ,ʼಚೆಂಕೋಲ್ʼ,ಮಲಪ್ಪುರಂ ಹಾಜಿ ಮಹಾನಯ ಜೋಜಿ,ʼಪ್ರಯಿಕ್ಕರ ಪಪ್ಪನ್ʼ,ʼಉದ್ಯಾನಪಾಲಕಂʼ,ʼಈ ಪೂಜಯುಂʼ,ʼಕಡನ್ನುʼ, ʼವಾಸ್ತವಂʼ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಮಲಯಾಳಂ ನ ಖ್ಯಾತ ಸೀರಿಯಲ್ (ಕಿರುತೆರೆ) ಗಳಲ್ಲೂ ಪ್ರಮುಖ ಪಾತ್ರಗಳಿಗೆ ಮೇಘನಾಥನ್ ಬಣ್ಣ ಹಚ್ಚಿದ್ದರು.
ಕೆಲ ವರ್ಷಗಳಿಂದ ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೇಘನಾಥನ್ ಅವರನ್ನು ಇತ್ತೀಚೆಗಷ್ಟೇ ಕೋಳಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಬೆಳಗಿನ ಜಾವ 2 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೇಘನಾಥನ್ ಪತ್ನಿ ಸುಶ್ಮಿತಾ ಮತ್ತು ಪುತ್ರಿ ಪಾರ್ವತಿ ಅವರನ್ನು ಅಗಲಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಸುಮಾರು ಮೂರು ದಶಕಗಳ ಕಾಲ ತಮಿಳು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಡೆಲ್ಲಿ ಗಣೇಶ್(Delhi Ganesh) ವಿಧಿವಶರಾಗಿದ್ದರು. ಅವರಿಗೆ 80ವರ್ಷ ವಯಸ್ಸಾಗಿತ್ತು. ಇನ್ನು ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸುದ್ದಿ ಪೋಸ್ಟ್ ಮಾಡಿ ಅವರ ಪುತ್ರ ಮಹದೇವನ್, ಡೆಲ್ಲಿ ಗಣೇಶ್ ಅಗಲಿಕೆ ಬಗ್ಗೆ ಖಚಿತಪಡಿಸಿದ್ದರು. ನಮ್ಮ ತಂದೆ ಶ್ರೀ ದೆಹಲಿ ಗಣೇಶ್ ಅವರು ನವೆಂಬರ್ 9 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಿಧನರಾದರು ಎಂದು ತಿಳಿಸಲು ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Delhi Ganesh: 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಡೆಲ್ಲಿ ಗಣೇಶ್ ಇನ್ನಿಲ್ಲ