Sunday, 24th November 2024

ನಕಲಿ ಎನ್‌ಕೌಂಟರ್‌: ಐವರು ಪೊಲೀಸರಿಗೆ 15 ವರ್ಷಗಳ ಬಳಿಕ ಶಿಕ್ಷೆ

ಗ್ರಾ: ಲೂಟಿ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಡಗಿಯೊಬ್ಬರನ್ನು ನಕಲಿ ಎನ್‌ಕೌಂಟರ್‌ ನಲ್ಲಿ ಹತ್ಯೆ ಮಾಡಿದ ಪೊಲೀಸ್ ತಂಡದ ಐವರು ಪೊಲೀಸರಿಗೆ ಹದಿನಾರು ವರ್ಷಗಳ ಬಳಿಕ ಗಾಝಿಯಾಬಾದ್‌ನ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿ ಪೊಲೀಸರನ್ನು ತಪ್ಪಿತಸ್ಥರೆಂದು ನಿರ್ಣಯಿಸಿದೆ.

ತಾನು ಮಾಡಿಸಿಕೊಂಡ ಮನೆ ಕೆಲಸಕ್ಕೆ ಹಣ ನೀಡದ ಪೊಲೀಸ್ ಪೇದೆಯ ಜತೆ ಇದ್ದ ವ್ಯಾಜ್ಯದ ಹಿನ್ನೆಲೆಯಲ್ಲಿ ರಾಜಾರಾಮ್ ಶರ್ಮಾ ಅವರನ್ನು ಪೊಲೀಸರು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎನ್ನುವುದು ಸಂತ್ರಸ್ತರ ಕುಟುಂಬದ ಆರೋಪ.

2006ರ ಆಗಸ್ಟ್ 18ರಂದು ಅಸ್ವಸ್ಥ ಸಹೋದರಿಯನ್ನು ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಶರ್ಮಾ ಅವರನ್ನು ಪೊಲೀ ಸರು ಅಪಹರಿಸಿದ್ದರು. ಅಪಹರಣಕ್ಕೆ ಒಳಗಾದ ಹತ್ತು ದಿನಗಳ ಬಳಿಕ ಅವರು ಹತ್ಯೆಯಾದ ಬಗ್ಗೆ ಕುಟುಂಬಕ್ಕೆ ತಿಳಿದು ಬಂದಿತ್ತು.

ಅಪರಿಚಿತ ಶವ ಎಂಬ ಸೋಗಿನಲ್ಲಿ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದರು.

ರಾಜಾರಾಂ ಅವರ ವಿರುದ್ಧ ಒಂದು ಪ್ರಕರಣವೂ ದಾಖಲಾಗಿರದ ಹಿನ್ನೆಲೆಯಲ್ಲಿ ಅವರನ್ನು ಶಂಕಿತ ಆರೋಪಿ ಎಂದು ಹಣೆ ಪಟ್ಟಿ ಕಟ್ಟಿದ ಬಗ್ಗೆ ಮತ್ತು ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.

2009ರ ಜೂನ್ 22ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. 2015ರ ಡಿಸೆಂಬರ್ 4ರಂದು ವಿಚಾರಣೆ ಆರಂಭವಾಗಿತ್ತು. 202 ಸಾಕ್ಷಿಗಳನ್ನು ಸಿಬಿಐ ಹಾಜರುಪಡಿಸಿತ್ತು. ಗಾಝಿಯಾಬಾದ್ ಸಿಬಿಐ ವಿಶೇಷ ನ್ಯಾಯಾಧೀಶ ಪರ್ವೇಂದರ್ ಕುಮಾರ್ ಶರ್ಮಾ ಅವರು ಠಾಣಾಧಿಕಾರಿ ಪವನ್ ಸಿಂಗ್, ಪಿಎಸ್‌ಐ ಪಾಲ್ ಸಿಂಗ್, ಪೇದೆಗಳಾದ ಸರ್ನಂ ಸಿಂಗ್, ರಾಜೇಂದ್ರ ಪ್ರಸಾದ್ ಮತ್ತು ಜೀಪು ಚಾಲಕ ಮೋಖಂ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಇವರ ಹೊರತಾಗಿ ನಾಲ್ವರು ಪೇದೆಗಳಾದ ಬಲದೇವ್ ಪ್ರಸಾದ್, ಅಜಯ್ ಕುಮಾರ್, ಅವಧೇಶ್ ರಾವತ್ ಹಾಗೂ ಸುಮೇರ್ ಸಿಂಗ್ ಅವರಿಗೆ ಸಾಕ್ಷ್ಯ ನಾಶಪಡಿಸಿದ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಐದು ವರ್ಷದ ಜೈಲು ಶಿಕ್ಷೆ ಹಾಗೂ ತಲಾ 11 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.