ನವದೆಹಲಿ: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್(Ajith Kumar) ನಟನೆ ಜತೆಗೆ ಕಾರ್ ರೇಸ್‌ನಲ್ಲೂ ಅತ್ಯಂತ ಹೆಚ್ಚು ಒಲವು ಹೊಂದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬೈಕ್ ಏರಿ ನಾಲ್ಕಾರು ದೇಶಗಳನ್ನು ಸುತ್ತಿ ಬಂದಿದ್ದರು. ಇದೀಗ ದುಬೈನಲ್ಲಿ ನಡೆದ ’24H ದುಬೈ ರೇಸಿಂಗ್’ನಲ್ಲಿ ಅಜಿತ್ ತಂಡ ಭಾಗಿಯಾಗಿ 3ನೇ ಸ್ಥಾನ ಪಡೆಯುವುದರೊಂದಿಗೆ ‘ಸ್ಪಿರಿಟ್ ಆಫ್ ರೇಸ್’ ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದೆ. ಅಜಿತ್ ಅವರ ಈ ಅಭೂತ ಸಾಧನೆಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ(Dubai Car Race).
Observe Shalini’s intense gaze, her eyes filled with love, after Ajit wins third prize in the Michelin 24H race GT4 991 class in Dubai. pic.twitter.com/znKishsZqM
— MadKar (@sadagnana) January 13, 2025
ಇನ್ನು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಬಳಿಕ ಅಜಿತ್ ಸಂಭ್ರಮಾಚರಣೆಯ ಫೋಟೊ, ವಿಡಿಯೊಗಳು ವೈರಲ್ ಆಗುತ್ತಿವೆ. ತಮ್ಮ ಪ್ರೀತಿಯ ಪತ್ನಿಗೆ ಮುತ್ತಿಟ್ಟು ಅಜಿತ್ ಸಂಭ್ರಮಿಸಿದ್ದು, ತ್ರಿವರ್ಣ ಧ್ವಜ ಹಿಡಿದು ರ‍್ಯಾಂಕಿಂಗ್ ಸ್ಟ್ಯಾಂಡ್ ಏರಿದ್ದಾರೆ. 13 ವರ್ಷಗಳ ಬಳಿಕ ನಟ ಅಜಿತ್ ರೇಸಿಂಗ್‌ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ತಾಲೀಮು ನಡೆಸುವ ವೇಳೆ ಕಾರು ಅಪಘಾತವಾಗಿತ್ತು. ಆದರೆ ಯಾವುದೇ ಸಮಸ್ಯೆ ಇಲ್ಲದೆ ಪ್ರಾಣಪಾಯದಿಂದ ಪಾರಾಗಿದ್ದರು. ಇದೀಗ ಅದೆಲ್ಲವನ್ನು ಮೆಟ್ಟಿ ರೇಸಿಂಗ್‌ನಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ವರ್ಷಗಳ ಕಾಲ ತಾಲೀಮು ನಡೆಸಿದ್ದರು.
ಅಭಿನಂದನೆಗಳ ಮಹಾಪೂರ
ಅಜಿತ್ ಕಾರ್ ರೇಸ್‌ನಲ್ಲಿ ಗೆಲ್ಲುತ್ತಿದ್ದಂತೆ ಆಪ್ತರು, ರಾಜಕಾರಣಿಗಳು, ಸಿನಿಮಾ ತಾರೆಯರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ತೆಲುಗು ನಟ ನಾಗಚೈತನ್ಯಗೂ ಕಾರ್ ರೇಸ್ ಕ್ರೇಜ್ ಇದ್ದು, ಅಜಿತ್ ಗೆಲುವು ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಹಿರಿಯ ನಟ ಕಮಲ್ ಹಾಸನ್, ಸೂಪರ್ ಸ್ಟಾರ್ ರಜನಿಕಾಂತ್, ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
ಅಜಿತ್ ಸದ್ಯ ‘ವಿಡಾಮುಯರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲೇ ‘ವಿಡಾಮುಯರ್ಚಿ’ ಸಿನಿಮಾ ತೆರೆಯ ಮೇಲೆ ಬರಬೇಕಿತ್ತು. ಮಗಿಳ್ ತಿರುಮನೇನಿ ಸಾರಥ್ಯದ ‘ವಿಡಾಮಯರ್ಚಿ’ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ರೆಜಿನಾ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಏಪ್ರಿಲ್ 10ಕ್ಕೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಆ ಚಿತ್ರದಲ್ಲೂ ಅಜಿತ್‌ಗೆ ತ್ರಿಶಾ ನಾಯಕಿಯಾಗಿದ್ದಾರೆ. ಅದಿಕ್ ರವಿಚಂದ್ರನ್ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಿತ್ ಸದ್ಯದಲ್ಲೇ ಬೈಕ್ ಏರಿ ಮತ್ತೆ ವಿಶ್ವ ಪರ್ಯಟನೆಗೆ ಹೊರಡಲಿದ್ದಾರೆ. ಈ ಹಿಂದೆ ಭಾರತ, ನೇಪಾಳ್, ಭೂತಾನ್ ದೇಶಗಳಲ್ಲಿ ಅಜಿತ್ ತಮ್ಮ ತಂಡದ ಜೊತೆ ಸುತ್ತಾಡಿ ಬಂದಿದ್ದರು.
ತಮ್ಮ ಸಿನಿಮಾಗಳ ಚಿತ್ರೀಕರಣದ ವೇಳೆ ಬೈಕ್, ಕಾರ್ ಸ್ಟಂಟ್‌ಗಳನ್ನು ಯಾವುದೇ ಡ್ಯೂಪ್ ಇಲ್ಲದೇ ಸ್ವತಃ ಅಜಿತ್ ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಅವಘಡಗಳು ಸಂಭವಿಸಿವೆ. ‘ವಲಿಮೈ’ ಚಿತ್ರದ ಚಿತ್ರೀಕರಣದ ವೇಳೆ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ‘ವಿಡಾಮುಯರ್ಚಿ’ ಚಿತ್ರದ ಶೂಟಿಂಗ್ ವೇಳೆ ಕಾರ್ ಸ್ಟಂಟ್ ವಿಡಿಯೊ ಭಾರೀ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್