ಲಖನೌ: “ಕೇವಲ ವಿವಾಹದ ಉದ್ದೇಶಕ್ಕಾಗಿ” ಧಾರ್ಮಿಕ ಮತಾಂತರವನ್ನು ಸ್ವೀಕಾರಾರ್ಹವಲ್ಲ ಎಂದು ಈ ಹಿಂದೆ ತಾನೇ ನೀಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ರದ್ದು ಮಾಡಿದೆ. ಅಲಹಾಬಾದ್ ಹೈಕೋರ್ಟ್ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.
ತಮ್ಮ ಮಗಳನ್ನು ಮತಾಂತರ ಮಾಡಿ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಯುವತಿಯ ಪೋಷಕರು ಮುಸ್ಲಿಂ ಯುವಕನ ವಿರುದ್ಧ ದಾಖಲಿಸಿದ್ದ ದೂರನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ, ವೈಯಕ್ತಿಕ ಸಂಬಂಧದ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಇಬ್ಬರ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯದ ಹಕ್ಕನ್ನು ಅತಿಕ್ರಮಣ ಮಾಡಿಕೊಂಡಂತಾಗಲಿದೆ. ದೇಶದಲ್ಲಿ ಲವ್ ಜಿಹಾದ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ನಡುವೆಯೇ ಈ ತೀರ್ಪನ್ನು ನೀಡುತ್ತಿರುವುದನ್ನು ಕೋರ್ಟ್ ಗಮನಿಸಿರುವುದಾಗಿಯೂ ತಿಳಿಸಿದೆ.
ಭಾರತದ ಸಂವಿಧಾನದ ಪರಿಚ್ಛೇದ 21ರ ಪ್ರಕಾರವೂ ವೈಯಕ್ತಿಕ ಜೀವನ ಮತ್ತು ಸ್ವಾತಂತ್ರ್ಯವನ್ನು ನ್ಯಾಯಾಲಯ ಮತ್ತು ಸಾಂವಿಧಾನಿಕ ನ್ಯಾಯಾಲಯವೂ ಕೂಡಾ ಮುಖ್ಯವಾಗಿ ಎತ್ತಿಹಿಡಿದಿರುವುದಾಗಿ ಅಲಹಾಬಾದ್ ಹೈಕೋರ್ಟ್ ನ ದ್ವಿಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
ಸಲ್ಮಾನ್ ಅನ್ಸಾರಿ ಪೂರ್ವ ಉತ್ತರಪ್ರದೇಶದ ಕುಶಿನಗರ್ ನಿವಾಸಿಯಾಗಿದ್ದು, ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಪ್ರಿಯಾಂಕಾ ಖಾರ್ವಾರ್ ಪೋಷಕರ ವಿರೋಧದ ನಡುವೆಯೇ ಅನ್ಸಾರಿಯನ್ನು ವಿವಾಹವಾಗಿದ್ದಳು. ಮದುವೆಗೂ ಸ್ವಲ್ಪ ದಿನದ ಮೊದಲು ಪ್ರಿಯಾಂಕಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು “ಅಲಿಯಾ” ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.