Sunday, 5th January 2025

Allu Arjun: ಕಾಲ್ತುಳಿತ ಪ್ರಕರಣ; ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಷರತ್ತುಬದ್ಧ ಜಾಮೀನು

ಹೈದರಾಬಾದ್:‌ ಕಾಲ್ತುಳಿತ ಪ್ರಕರಣದಲ್ಲಿ(Stampede Case) ಅಲ್ಲು ಅರ್ಜುನ್​ಗೆ(Allu Arjun) ತೆಲಂಗಾಣ ಹೈಕೋರ್ಟ್ ಈ ಹಿಂದೆ​ ಮಧ್ಯಂತರ ಜಾಮೀನು ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರೆಗ್ಯುಲರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನಾಂಪಲ್ಲಿ ಕೋರ್ಟ್​ನಲ್ಲಿ ಈ ಅರ್ಜಿಯ ವಿಚಾರಣೆಯ ನಡೆದು ಇಂದು (ಜ. 3) ನ್ಯಾಯಾಧೀಶರ ಆದೇಶ ಹೊರಬಿದ್ದಿದ್ದು, ಪ್ರಕರಣದಲ್ಲಿ ಅಲ್ಲು ಅರ್ಜುನ್​ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

ಡಿಸೆಂಬರ್ 4ರಂದು ಹೈದರಾಬಾದ್​ನ ಸಂಧ್ಯಾ ಚಿತ್ರಮಂದಿರದಲ್ಲಿ ʼಪುಷ್ಪ 2ʼ ಚಿತ್ರದ ಪ್ರೀಮಿಯರ್‌ ಶೋ ನಡೆದಿತ್ತು. ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದಾಗ ಭಾರೀ ನೂಕು ನುಗ್ಗಲುಗಳಾಗಿ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಮೃತ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಸೇರಿದಂತೆ ಸಂಧ್ಯಾ ಚಿತ್ರಮಂದಿರ ಮಾಲೀಕ ಹಾಗೂ ಮ್ಯಾನೇಜರ್ ಅನ್ನು ಬಂಧಿಸಿದ್ದರು.

ಅಲ್ಲು ಅರ್ಜುನ್ ಬಂಧನವಾದ ದಿನವೇ ತೆಲಂಗಾಣ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಮಧ್ಯಂತರ ಜಾಮೀನು ಪಡೆಯಲಾಗಿತ್ತು. ಅಂತೆಯೇ ನಾಂಪಲ್ಲಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಹ ಹಾಕಲಾಗಿತ್ತು. ಈ ಹಿಂದೆಯೂ ಒಮ್ಮೆ ಜಾಮೀನು ವಿಚಾರಣೆ ನಡೆದಿದ್ದು, ಆದೇಶವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಇಂದು ಆದೇಶ ಹೊರಬಿದ್ದಿದ್ದು ಪ್ರಕರಣದಲ್ಲಿ ಅಲ್ಲು ಅರ್ಜುನ್​ಗೆ ಜಾಮೀನು ದೊರೆತಿದೆ. ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಜಾಮೀನು ನೀಡಿರುವ ನಾಂಪಲ್ಲಿ ನ್ಯಾಯಾಲಯ, 1 ಲಕ್ಷ ರೂ. ಭದ್ರತಾ ಮೊತ್ತ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ವಿದೇಶ ಪ್ರಯಾಣದ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎನ್ನಲಾಗುತ್ತಿದೆ. ಜಾಮೀನು ದೊರೆತಿರುವ ಕಾರಣ ನಿರಾಳರಾಗಿರುವ ಅಲ್ಲು ಅರ್ಜುನ್, ಮುಂದೆ ತಮ್ಮ ಮೇಲಿನ ಪ್ರಕರಣ ರದ್ದು ಪಡಿಸಲು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಇದೇ ಪ್ರಕರಣದಲ್ಲಿ ‘ಪುಷ್ಪ 2’ ಸಿನಿಮಾದ ನಿರ್ಮಾಪಕರ ಮೇಲೂ ಎಫ್​ಐಆರ್ ದಾಖಲಾಗಿತ್ತು. ಆದರೆ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದ ಮೈತ್ರಿ ಮೂವಿ ಮೇಕರ್ಸ್ ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದೇಶ ನೀಡಿದ ಹೈಕೋರ್ಟ್, ನಿರ್ಮಾಪಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿರುವ ಜೊತೆಗೆ ಆರೋಪಿಗಳನ್ನು ಸರಿಯಾಗಿ ಹೆಸರಿಸಿ ಮತ್ತೊಮ್ಮೆ ಪಿಟಿಷನ್ ಸಲ್ಲಿಸುವಂತೆ ಸೂಚಿಸಿದೆ.

ಈ ಸುದ್ದಿಯನ್ನೂ ಓದಿ:Maha Kumbh 2025: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ದಿನಗಣನೆ; ತ್ರಿವೇಣಿ ಸಂಗಮದಲ್ಲಿ ಪುಣ್ಯಕ್ಷಣ ಹೇಗಿರಲಿದೆ?