Thursday, 26th December 2024

Allu Arjun: ‘ಪುಷ್ಪ 2’ ಪ್ರೀಮಿಯರ್‌ ಶೋ ವೇಳೆ ಬಲಿಯಾದ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂ. ಘೋಷಿಸಿದ ಅಲ್ಲು ಅರ್ಜುನ್‌

Allu Arjun

ಹೈದರಾಬಾದ್‌: ಬಹು ನಿರೀಕ್ಷಿತ ‘ಪುಷ್ಪ 2’ (Pushpa 2) ಚಿತ್ರ ಡಿ. 5ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಅಂದುಕೊಂಡಂತೆ ಬಾಕ್ಸ್‌ ಆಫೀಸ್‌ನಲ್ಲಿ ಪುಷ್ಪರಾಜ್‌ನ ಅಬ್ಬರ ಜೋರಾಗಿದ್ದು, ದಾಖಲೆಯ ಕಲೆಕ್ಷನ್‌ ಮಾಡುತ್ತಿದೆ. ಈ ಮಧ್ಯೆ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಮಹಿಳೆ ಕುಟುಂಬಕ್ಕಾಗಿ ‘ಪುಷ್ಪ 2’ ಚಿತ್ರದ ನಾಯಕ ಅಲ್ಲು ಅರ್ಜುನ್‌ (Allu Arjun) ಹೃದಯ ಮಿಡಿದಿದ್ದು, ಅವರ ಸಹಾಯಕ್ಕೆ ಧಾವಿಸಿದ್ದಾರೆ. 25 ಲಕ್ಷ ರೂ. ಒದಗಿಸುವುದಾಗಿ ವಾಗ್ದಾನ ನೀಡಿದ್ದಾರೆ.

ಏನಿದು ದುರಂತ?

ಡಿ. 4ರ ರಾತ್ರಿ ʻಪುಷ್ಪ 2: ದಿ ರೂಲ್ʼ ಚಿತ್ರತಂಡ ಪ್ರೀಮಿಯರ್‌ ಶೋ ಏರ್ಪಡಿಸಿತ್ತು. ಈ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್‌ ಆಗಮಿಸಿ ಚಿತ್ರ ವೀಕ್ಷಿಸಿದ್ದರು. ನೆಚ್ಚಿನ ನಟನನ್ನು ವೀಕ್ಷಿಸಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಈ ಗಲಾಟೆ ವೇಳೆ ಕಾಲ್ತುಳಿತ ಸಂಭವಿಸಿ ರೇವತಿ (39) ಮೃತಪಟ್ಟು, ಅವರ ಪುತ್ರನಿಗೆ ಗಂಭೀರ ಗಾಯಗಳಾಗಿತ್ತು.

ಈ ಘಟನೆಗೆ ಚಿತ್ರತಂಡ ಆಘಾತ ವ್ಯಕ್ತಪಡಿಸಿದ್ದು, ಮಹಿಳೆಯ ಕುಟುಂಬದ ನೆರವಿಗೆ ಧಾವಿಸಿದೆ. ಸದ್ಯ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ನೆರವು ನೀಡುವುದಾಗಿಯೂ ಅಲ್ಲು ಅರ್ಜುನ್‌ ತಿಳಿಸಿದ್ದಾರೆ.

ಅಲ್ಲು ಅರ್ಜುನ್‌ ಹೇಳಿದ್ದೇನು?

ವಿಡಿಯೊ ಸಂದೇಶ ಹಂಚಿಕೊಂಡ ಅಲ್ಲು ಅರ್ಜುನ್‌ ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ ಎಂದು ಅವರು ಹೇಳಿದ್ದಾರೆ. ರೇವತಿ ಕುಟುಂಬಕ್ಕೆ 25 ಲಕ್ಷ ರೂ. ವಾಗ್ದಾನ ಮಾಡಿದ್ದಾರೆ. ಸದ್ಯದಲ್ಲೇ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳುವುದಾಗಿ ತಿಳಿಸಿದ್ದಾರೆ. ʼʼಸಂಧ್ಯಾ ಥಿಯೇಟರ್‌ ಬಳಿ ಸಂಭವಿಸಿದ ದುರುಂತದ ಸುದ್ದಿ ಕೇಳಿ ಆಘಾತವಾಗಿದೆ. ಈ ನೋವಿನ ವೇಳೆ ಕುಟುಂಬದ ಜತೆಗೆ ನಾನೂ ನಿಲ್ಲುತ್ತೇನೆ. ಶೀಘ್ರದಲ್ಲೇ ಅವರ ಕುಟಿಂಬದ ಸದಸ್ಯರನ್ನು ಭೇಟಿಯಾಗುತ್ತೇನೆ. ಅವರಿಗೆ ಅಗತ್ಯವಾದ ಎಲ್ಲ ನೆರವು ನೀಡಲು ಸಿದ್ಧನಾಗಿದ್ದೇನೆʼʼ ಎಂದು ಅಲ್ಲು ಅರ್ಜುನ್‌ ತಿಳಿಸಿದ್ದಾರೆ. ಎಚ್ಚರಿಕೆಯಿಂದ ಥಿಯೇಟರ್‌ಗೆ ಹೋಗಿ ಚಿತ್ರವನ್ನು ಎಂಜಾಯ್‌ ಮಾಡಿ. ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಎಂದಿದ್ದಾರೆ.

ಅಲ್ಲು ಅರ್ಜುನ್‌ ವಿರುದ್ಧ ಕೇಸ್‌

ಹೈದರಾಬಾದ್‌ನ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ ಅವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಅವರ ಜತೆ ಥಿಯೇಟರ್‌ ಮಾಲಿಕರ ವಿರುದ್ಧ ದೂರು ದಾಖಲಾಗಿದೆ. ಚಿತ್ರತಂಡ ಆಗಮಿಸುವ ಬಗ್ಗೆ ಚಿತ್ರಮಂದಿರ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ನಟ-ನಟಿಯರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಿಲ್ಲ. ಚಿತ್ರಮಂದಿರದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇರರಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸುಕುಮಾರ್‌ ನಿರ್ದೇಶನದ ʼಪುಷ್ಪ 2ʼ ಚಿತ್ರದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಜತೆಗೆ ಫಹದ್‌ ಫಾಸಿಲ್‌, ಸುನೀಲ್‌, ಡಾಲಿ ಧನಂಜಯ್‌, ಅನಸೂಯ ಮತ್ತಿತರರು ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2: ಪುಷ್ಪ 2 ಅಬ್ಬರದ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ ಕಾನೂನು ಸಂಕಷ್ಟ-ಕೇಸ್‌ ದಾಖಲು?