Wednesday, 8th January 2025

Allu Arjun: ʻಪುಷ್ಪರಾಜ್‌ʼಗೆ ಶಾಕ್‌ ಮೇಲೆ ಶಾಕ್‌! ಅಲ್ಲು ಅರ್ಜುನ್‌ ವಿರುದ್ಧ ಮತ್ತೊಂದು ಕೇಸ್‌; ಅತ್ತ ಪೊಲೀಸರಿಂದ ಸಮನ್ಸ್‌

Allu Arjun

ಹೈದರಾಬಾದ್‌ : ಪುಷ್ಪಾ 2 ಸಂಧ್ಯಾ ಥಿಯೇಟರ್‌ ಬಳಿ ನಡೆದ ಕಾಲ್ತುಳಿತದಲ್ಲಿ (Hyderabad stampede) ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Hyderabad Police) ತೆಲಗು ನಟ ಅಲ್ಲು ಅರ್ಜುನ್‌ (Allu Arjun) ವರನ್ನು ಬಂಧಿಸಿದ್ದರು. ಇದೀಗ ಅಲ್ಲು ಅರ್ಜುನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತೆಲಂಗಾಣದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ, ಅದರಲ್ಲಿ ಒಂದು ದೃಶ್ಯವು ಪೊಲೀಸ್ ಪಡೆಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ತೀನ್ಮಾರ್ ಮಲ್ಲಣ್ಣ ಮೇಡಿಪಲ್ಲಿ, ಪೊಲೀಸ್ ಠಾಣೆಯಲ್ಲಿ ಪುಷ್ಪಾ 2 ನಿರ್ದೇಶಕ ಸುಕುಮಾರ್ ಹಾಗೂ ನಟ ಅಲ್ಲು ಅರ್ಜುನ್‌ ಹಾಗೂ ನಿರ್ಮಾಪಕರ ಮೇಲೆ ದೂರು ದಾಖಲಿಸಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಈಜುಕೊಳದಲ್ಲಿದ್ದಾಗ ನಾಯಕ ಮೂತ್ರ ವಿಸರ್ಜನೆ ಮಾಡುವ ದೃಶ್ಯವನ್ನು ತೇನ್ಮಾರ್ ಮಲ್ಲಣ್ಣ ವಿಶೇಷವಾಗಿ ಟೀಕಿಸಿದ್ದಾರೆ. ಈ ದೃಶ್ಯ ಅಧಿಕಾರಿಗಳ ಘನತೆಗೆ ಕುಂದು ತಂದಿದೆ ಎಂದು ಬಣ್ಣಿಸಿದರು. ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ನಾಯಕ ನಟ ಅಲ್ಲು ಅರ್ಜುನ್ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಅಲ್ಲು ಅರ್ಜುನ್‌ಗೆ ಸಮನ್ಸ್

ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್‌ಗೆ ಹೊಸ ಸಮನ್ಸ್ ಜಾರಿ ಮಾಡಿದ್ದಾರೆ.  ಕಾಲ್ತುಳಿತದ ನಂತರ ಪೊಲೀಸರು ನಟನನ್ನು ಅವರ ನಿವಾಸದಿಂದ ಬಂಧಿಸಿ ಕರೆದೊಯ್ದಿದ್ದರು. ನಂತರ ಕೆಳಹಂತದ ನ್ಯಾಯಾಲಯ 14 ದಿನಗಳ ಬಂಧನದ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು ಅಲ್ಲು ಅರ್ಜುನ್‌ ಹೈಕೋರ್ಟ್‌ ಮಧ್ಯಂತರ ಜಮೀನನ್ನು ನೀಡಿತ್ತು. ಸದ್ಯ ನಟ ಜಾಮೀನಿನ ಮೇಲೆ ಹೊರಗಿದ್ದಾರೆ.

ಆದರೆ ಇದೀಗ ಹೈದರಾಬಾದ್ ಪೊಲೀಸರು ಮಧ್ಯಂತರ ಜಾಮೀನಿನ ವಿರುದ್ಧ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಅಲ್ಲು ಅರ್ಜುನ್‌ ಪತ್ರಿಕಾಗೋಷ್ಠಿಯನ್ನು ನಡೆಸಿ ಹೈಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಇದಾದ ನಂತರ ಪೊಲೀಸರು ಹೈಕೋರ್ಟ್‌ಗೆ ಹೋಗಬಹುದು ಎಂದು ಹೇಳಲಾಗುತ್ತಿದೆ.

ನ್ಯಾಯಾಲಯದ ಮುಂದೆ ತ ಪೊಲೀಸರು ವೀಡಿಯೊ ಸಾಕ್ಷ್ಯವನ್ನು ಪ್ರಸ್ತುತಪಡಿಸುತ್ತಾರೆ ಎಂದು ವರದಿಗಳು ಸೂಚಿಸುತ್ತವೆ. ಡಿಸೆಂಬರ್ 4 ರಂದು ‘ಪುಷ್ಪಾ-2’ ಚಿತ್ರದ ಪ್ರದರ್ಶನದ ವೇಳೆ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಥಿಯೇಟರ್‌ನಿಂದ ಹೊರಹೋಗುವಂತೆ ತಿಳಿಸಿದ್ದರೂ ಅಲ್ಲು ಅರ್ಜುನ್ ಥಿಯೇಟರ್‌ನಿಂದ ಹೊರಬರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ. 

2024 ರ ವಾರ್ಷಿಕ ರೌಂಡ್ ಅಪ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಸಿವಿ ಆನಂದ್, ಕಾಲ್ತುಳಿತ ಸಂಭವಿಸಿದಾಗ ಉಂಟಾದ ಪರಿಸ್ಥಿತಿಯ ಕುರಿತು ಪೊಲೀಸರು ಮಾಡಿದ ವಿಡಿಯೊವನ್ನು ಭಾನುವಾರ ತೋರಿಸಿದ್ದಾರೆ. ಈ ಮೂಲಕ ಮಹಿಳೆ ಮೃತ ಪಟ್ಟಿದ್ದು ತನಗೆ ಗೊತ್ತೇ ಇಲ್ಲ ಎಂದಿದ್ದ ನಟನಿಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ನಟ ಮಧ್ಯರಾತ್ರಿಯವರೆಗೆ ಥಿಯೇಟರ್‌ನಲ್ಲಿಯೇ ಇದ್ದರು ಎಂದು ಸೂಚಿಸುತ್ತದೆ.

ಸಿನಿಮಾ ಹಾಲ್‌ನಲ್ಲಿ ಕಾಲ್ತುಳಿತ ಸಂಭವಿಸಿದಾಗ ಅಲ್ಲು ಅರ್ಜುನ್ ನೇಮಿಸಿದ ಬೌನ್ಸರ್‌ಗಳು ಜನಸಂದಣಿ ಮತ್ತು ಪೊಲೀಸರನ್ನು ತಳ್ಳಿದರು ಎಂಬ ಆರೋಪದ ನಡುವೆ, ಬೌನ್ಸರ್‌ಗಳು ಕರ್ತವ್ಯದಲ್ಲಿರುವ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌