Friday, 22nd November 2024

ಅಮರನಾಥ ಯಾತ್ರೆ ಪುನರಾರಂಭ: ಪವಿತ್ರ ಗುಹೆಯತ್ತ 13ನೇ ತಂಡ

ಜಮ್ಮು: ಭಾರೀ ಮಳೆ ಅನಾಹುತಗಳಿಂದ ಚೇತರಿಸಿಕೊಂಡ ಬಳಿಕ ಅಮರ ನಾಥ ಯಾತ್ರೆ ಶುರುವಾಗಿದ್ದು, ಮಂಗಳವಾರ ಬೆಳಗ್ಗೆ 13ನೇ ತಂಡದಲ್ಲಿ 7 ಸಾವಿರ ಭಕ್ತರು ಪವಿತ್ರ ಗುಹೆಯ ದರ್ಶನದತ್ತ ಪ್ರಯಾಣಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಯಾತ್ರೆ ಶುರುವಾಗಿದ್ದು, ಪಹ್ಲಗಾಮ್ ಮತ್ತು ಬ್ಲಾತಲ್‍ನ ಟ್ವೀನ್ ಬೇಸ್ ಕ್ಯಾಂಪ್‍ನಿಂದ ಒಟ್ಟು 265 ವಾಹನಗಳಲ್ಲಿ 7,107 ಮಂದಿ ಯಾತ್ರೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಮುಂಗಾವಲು ಪಡೆಗಳು ಯಾತ್ರಿಕರಿಗೆ ಬೆಂಬಲವಾಗಿವೆ.

ಬ್ಲಾತ್ಲಾ ಬೇಸ್ ಕ್ಯಾಂಪ್‍ನಿಂದ 1949 ಯಾತ್ರಿಕರು 98 ವಾಹನಗಳಲ್ಲಿ ಹಾಗೂ 5158 ಯಾತ್ರಿಕರು 175 ವಾಹನಗಳಲ್ಲಿ ನ್ಯೂವಾನ್ ಪಹ್ಲಗಾಮ್ ಕ್ಯಾಂಪ್‍ನಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ 76,662 ಭಕ್ತರು ಭಘವತಿ ನಗರ್ ಬೆಸ್ ಕ್ಯಾಂಪ್‍ನ್‍ಲ್ಲಿ ಉಳಿದಿದ್ದಾರೆ. 43 ದಿನಗಳ 3880 ಮೀಟರ್ ಎತ್ತರದ ಅಮರನಾಥ್ ಯಾತ್ರೆಗೆ ಸಾವಿರಾರು ಯಾತ್ರಿಕರು ಆಗಮಿಸಿದ್ದಾರೆ.

ಈವರೆಗೂ 1.20 ಲಕ್ಷ ಯಾತ್ರಿಕರು ಅಮರನಾಥ್ ಗುಹೆಯ ದರ್ಶನ ಪಡೆದಿದ್ದಾರೆ. ಶ್ರಾವಣ ಪೂರ್ಣಿಮೆಯ ಆಗಸ್ಟ್ 11ರಂದು ಯಾತ್ರೆ ಅಂತ್ಯಗೊಳ್ಳಲಿದೆ. ಕಳೆದ ವಾರ ಭಾರೀ ಮಳೆಯಿಂದ ದಿಡೀರ್ ಪ್ರವಾಹ ಸೃಷ್ಟಿಯಾಗಿ 16 ಮಂದಿ ಮೃತಪಟ್ಟಿದ್ದರು. 105 ಮಂದಿ ಗಾಯಗೊಂಡು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.