Wednesday, 18th December 2024

Ambedkar Row: ಅಂಬೇಡ್ಕರ್‌ ಫೋಟೊ ಹಿಡಿದು ಸಂಸತ್‌ ಎದುರು ಪ್ರತಿಪಕ್ಷಗಳ ಪ್ರೊಟೆಸ್ಟ್‌- ಅಮಿತ್‌ ಶಾ ರಾಜೀನಾಮೆಗೆ ಆಗ್ರಹ

Ambedkar row

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌(Ambedkar Row) ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರ ವಿವಾದಾತ್ಮಕ ಹೇಳಿಕೆ ಸಂಸತ್‌ ಹೊರಗೆ ಮತ್ತು ಒಳಗೆ ಅಂಬೇಡ್ಕರ್‌ ವಿಚಾರ ಬಹಳಷ್ಟು ಸದ್ದು ಮಾಡುತ್ತಿದೆ. ಸಂಸತ್‌ನಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು. ಇನ್ನು ಶಾ ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ತಿರುಚುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವಮಾನಿಸಿದ್ದಾರೆ. ಅವರ ಮನುಸ್ಮೃತಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಗೌರವಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಇದನ್ನು ನಾವು ಖಂಡಿಸುತ್ತೇವೆ ಮತ್ತು ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತೇವೆ. ಅವರು ಜನರಲ್ಲಿ ಕ್ಷಮೆಯಾಚಿಸಬೇಕು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಖರ್ಗೆ ಹೇಳಿದರು.

ಇನ್ನು ಸಂಸತ್‌ ಎದುರು ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಇಂಡಿ ಮೈತ್ರಿಕೂಟದ ನಾಯಕರು ಅಂಬೇಡ್ಕರ್‌ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಬಿಜೆಪಿ ಆಡಳಿತದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವುದು ಅಪರಾಧ ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಏತನ್ಮಧ್ಯೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಇಂದು ಬಿಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದೆ ಮತ್ತು ಎರಡು ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಅದರೊಂದಿಗೆ ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬರನ್ನು ಅವಮಾನಿಸಿ 1952ರಲ್ಲಿ ಷಡ್ಯಂತ್ರದ ಮೂಲಕ ಚುನಾವಣೆಯಲ್ಲಿ ಅವರನ್ನು ಸೋಲಿಸಿತು. ನಂತರ ನಡೆದ ಉಪಚುನಾವಣೆಯಲ್ಲಿ ವಿದರ್ಭದಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸದಿದ್ದರೆ, 1952ರ ನಂತರವೂ ಬಾಬಾ ಸಾಹೇಬ್ ಈ ಸಂಸತ್ತಿನ ಭಾಗವಾಗುತ್ತಿದ್ದರು ಎಂದು ರಿಜಿಜು ಟಾಂಗ್‌ ಕೊಟ್ಟಿದ್ದರು.

ಅಮಿತ್‌ ಶಾ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ಅಮಿತ್‌ ಶಾ, ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಕಾಂಗ್ರೆಸ್ ಫ್ಯಾಶನ್ ಮಾಡಿಕೊಂಡಿದೆ. ಅಂಬೇಡ್ಕರ್ ಬದಲು ದೇವರ ಹೆಸರನ್ನು ಹಲವು ಬಾರಿ ಹೇಳಿದ್ದರೆ ಅವರಿಗೆ ಏಳು ಜನ್ಮದ ಪ್ರಾಪ್ತಿಯಾಗುತ್ತಿತ್ತು. ನೀವು 100 ಬಾರಿ ಅಂಬೇಡ್ಕರ್ ಅವರ ಹೆಸರನ್ನು ಜಪಿಸುತ್ತಿರುತ್ತೀರಿ, ಇಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದರೆ 7 ಬಾರಿ ಸ್ವರ್ಗಕ್ಕೆ ಹೋಗುತ್ತಿದ್ದಿರಿ’ ಎಂದಿದ್ದರು.

ಈ ಸುದ್ದಿಯನ್ನೂ ಓದಿ: ಅಂಬೇಡ್ಕರ್‌ರನ್ನು ಅವಮಾನಿಸಿದ ಹಿಜಾಬಿಗಳು !