ನವದೆಹಲಿ: ದೇಶದಲ್ಲಿ ಶೀಘ್ರದಲ್ಲಿಯೇ ಜನಗಣತಿ (Census) ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಘೋಷಿಸಿದರು. ಈ ಬಗ್ಗೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಎನ್‌ಡಿಎ ಸರ್ಕಾರವು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ಜನಗಣತಿಯನ್ನು ಶೀಘ್ರದಲ್ಲೇ ನಡೆಸಲಾಗುವುದು. ಜನಗಣತಿ ಬಳಿಕ ಎಲ್ಲ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು” ಎಂದು ಅವರು ಹೇಳಿದರು. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ 2021ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಜನಗಣತಿಗೆ ಪ್ರಕ್ರಿಯೆ ಪೂರ್ಣಗೊಳ್ಳಲು 18 ತಿಂಗಳ ಅಗತ್ಯವಿದೆ ಎನ್ನಲಾಗಿದ್ದು, ವರದಿ 2026ರ ಮಾರ್ಚ್ ವೇಳೆಗೆ ಪ್ರಕಟವಾಗುವ ಸಾಧ್ಯತೆ ಇದೆ.
Addressing a press conference in New Delhi. #100DaysOfModi3 https://t.co/atv8XS0H6w
— Amit Shah (@AmitShah) September 17, 2024
ಅಮಿತ್ ಶಾ ಹೇಳಿದ್ದೇನು?
ಇದೇ ವೇಳೆ ಅಮಿತ್ ಅವರು ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 60 ವರ್ಷಗಳ ನಂತರ ಮೊದಲ ಬಾರಿಗೆ ದೇಶದಲ್ಲಿ ರಾಜಕೀಯ ಸ್ಥಿರತೆಯ ವಾತಾವರಣವಿದೆ ಎಂದ ಅವರು ದೇಶದ ವಿದೇಶಾಂಗ ನೀತಿಯನ್ನೂ ಶ್ಲಾಘಿಸಿದರು.
ʼʼಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 3ನೇ ಅವಧಿಯಲ್ಲಿ 3 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳು, ಮಧ್ಯಮ ವರ್ಗದವರಿಗೆ ತೆರಿಗೆ ಪ್ರಯೋಜನ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳಿಗೆ ಸಾಲ ಖಾತರಿ ಯೋಜನೆ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ವಿಮಾ ರಕ್ಷಣೆ ಘೋಷಿಸಿದೆ. ಅಲ್ಲದೆ 3 ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಗೊಳಿಸಿದೆ. ಜತೆಗೆ ಘೋಷಿಸಲಾದ ಇತರ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಂಡಿದೆʼʼ ಎಂದು ಅವರು ಹೇಳಿದರು.
“ಮೊದಲ 100 ದಿನಗಳಲ್ಲಿ ಬಹಳಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗಿದೆ. ಹೊಸ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮೋದಿ ಅವರು ಲೋಕಸಭಾ ಚುನಾವಣೆಗೆ ಆರು ತಿಂಗಳ ಮೊದಲೇ ಅಧಿಕಾರಿಗಳಿಗೆ ಸೂಚಿಸಿದ್ದೇ ಇದಕ್ಕೆ ಕಾರಣʼʼ ಎಂದು ಶಾ ತಿಳಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳ ಬಗ್ಗೆ ಮಾತನಾಡಿದ ಅಮಿತ್ ಶಾ ಅವರು, ಭವಿಷ್ಯದಲ್ಲಿ ಇಂತಹ ಅವಘಡ ನಡೆಯಂತೆ ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಯುವಜನತೆ, ಕೃಷಿಕರ ಕಲ್ಯಾಣಕ್ಕೆ ಒತ್ತು
ಯುವಜನತೆಗಾಗಿ 2 ಲಕ್ಷ ಕೋಟಿ ರೂ.ಗಳ ಪಿಎಂ ಪ್ಯಾಕೇಜ್ ಅನ್ನು ಸಹ ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ʼʼ5 ವರ್ಷಗಳಲ್ಲಿ 4.10 ಕೋಟಿ ಯುವಕರು ಇದರ ಲಾಭ ಪಡೆಯಲಿದ್ದಾರೆ. 1 ಕೋಟಿ ಯುವಕರಿಗೆ ಭತ್ಯೆಗಳು ಮತ್ತು ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆʼʼ ಎಂದು ಅವರು ಹೇಳಿದರು. ʼʼಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನಲ್ಲಿ ಸರ್ಕಾರವು 9.5 ಕೋಟಿ ರೈತರಿಗೆ 20,000 ಕೋಟಿ ರೂ.ಗಳನ್ನು ವಿತರಿಸಿದೆʼʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: PM Modi Birthday: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ; ರಾಷ್ಟ್ರಪತಿ ಸೇರಿ ಗಣ್ಯರಿಂದ ಶುಭಾಶಯಗಳ ಮಹಾಪೂರ