ಹೈದರಾಬಾದ್ : ಆಂಧ್ರಪ್ರದೇಶದ (Andhra Horror) ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಪಾರ್ಸೆಲ್ (Parcel) ಒಂದು ಸ್ವೀಕರಿಸಿದ್ದು, ಅದನ್ನು ತೆಗೆದು ನೋಡಿದಾಗ ಶಾಕ್‌ಗೆ ಒಳಗಾಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದ ಮಹಿಳೆ ಅಪರಿಚಿತ ವ್ಯಕ್ತಿಯ ಶವವಿದ್ದ ಪಾರ್ಸೆಲ್ ಸ್ವೀಕರಿಸಿದ್ದಾರೆ.
ನಾಗ ತುಳಸಿ ಎಂಬ ಮಹಿಳೆ ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯವರು ಮಹಿಳೆಗೆ ಟೈಲ್ಸ್ ಕಳುಹಿಸಿದ್ದಾರೆ. ನಿರ್ಮಾಣ ಸಮಯದಲ್ಲಿ ಹೆಚ್ಚಿನ ಸಹಾಯಕ್ಕಾಗಿ ಆಕೆ ಮತ್ತೆ ಕ್ಷತ್ರಿಯ ಸೇವಾ ಸಮಿತಿಗೆ ಮನವಿ ಮಾಡಿದಳು. ಈ ಬಾರಿ ಸಮಿತಿಯು ವಿದ್ಯುತ್ ಉಪಕರಣಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಎಂದು ವರದಿಯಾಗಿದೆ. ಅರ್ಜಿದಾರರಿಗೆ ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ವಸ್ತುಗಳನ್ನು ಒದಗಿಸುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶ ಬಂದಿತ್ತು.
ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಮಹಿಳೆಯ ಮನೆ ಬಾಗಿಲಿಗೆ ಬಾಕ್ಸ್ ತಲುಪಿಸಿ ಅದರಲ್ಲಿ ವಿದ್ಯುತ್ ಉಪಕರಣಗಳಿವೆ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ. ತುಳಸಿ ಪಾರ್ಸೆಲ್ ತೆರೆದು ನೋಡಿದಾಗ ವ್ಯಕ್ತಿಯ ಶವವನ್ನು ಕಂಡು ಆಘಾತಕ್ಕೊಳಗಾದರು. ಆಕೆಯ ಕುಟುಂಬದವರೂ ಭಯಭೀತರಾಗಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ನಾನ್ ನಯೀಮ್ ಅಸ್ಮಿ ಕೂಡ ಗ್ರಾ ಮಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸಿದ್ದಾರೆ.ಪಾರ್ಸೆಲ್‌ನಲ್ಲಿ 1.30 ಕೋಟಿ ರೂ. ಬೇಡಿಕೆಯಿರುವ ಪತ್ರವೂ ಪತ್ತೆಯಾಗಿದೆ ಮತ್ತು ಬೇಡಿಕೆಯನ್ನು ಪೂರೈಸಲು ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಎಚ್ಚರಿಕೆ ನೀಡಿದ್ದಾರೆ.
ಪಾರ್ಸೆಲ್ ತಲುಪಿಸಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕ್ಷತ್ರಿಯ ಸೇವಾ ಸಮಿತಿಯ ಪ್ರತಿನಿಧಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ಪೊಲೀಸರ ಪ್ರಕಾರ, ಇದು ಸುಮಾರು 45 ವರ್ಷ ವಯಸ್ಸಿನ ಪುರುಷನ ಶವವಾಗಿದೆ. 4-5 ದಿನಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯೇ ಎಂದು ತಿಳಿಯಲು ತನಿಖೆ ಮುಂದುವರೆದಿದೆ. ತನಿಖೆಯ ಭಾಗವಾಗಿ, ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾಣೆಯಾದ ದೂರುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ : BRS MLA Arrested: BRS ಶಾಸಕ ಅರೆಸ್ಟ್ – ವೈರಲ್ ಆಗುತ್ತಿರುವ ವಿಡಿಯೊದಲ್ಲೇನಿದೆ?