Thursday, 19th September 2024

Anna Sebastian Perayil: ಕೆಲಸದ ಒತ್ತಡದಿಂದ ಮಗಳು ಮೃತಪಟ್ಟರೂ ಅಂತ್ಯಕ್ರಿಯೆಗೆ ಕಂಪನಿಯಿಂದ ಯಾರೂ ಬಂದಿಲ್ಲ; ತಾಯಿಯ ಮನಮಿಡಿಯುವ ಪತ್ರ

Self Harming

ಅತಿಯಾದ ಕೆಲಸದ ಒತ್ತಡದಿಂದ ಮಗಳು ಮೃತಪಟ್ಟಿದ್ದರೂ (Anna Sebastian Perayil) ಆಕೆಯ ಅಂತಿಮ ಕ್ರಿಯೆಯಲ್ಲಿ ಸಂಸ್ಥೆಯ ಯಾವೊಬ್ಬ ಸಿಬ್ಬಂದಿಯೂ ಭಾಗವಹಿಸಿಲ್ಲ ಎಂದು ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ತಾಯಿ ಅನಿತಾ ಅಗಸ್ಟಿನ್ ಅವರು ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾದ (Ernst & Young-EY) ಅಧ್ಯಕ್ಷ ಅಧ್ಯಕ್ಷರಾದ ರಾಜೀವ್ ಮೆಮಾನಿ ಅವರಿಗೆ ಪತ್ರ ಬರೆದಿದ್ದಾರೆ.

ಮಗಳು ಕಂಪೆನಿಗೆ ಸೇರಿ ಕೇವಲ ನಾಲ್ಕು ತಿಂಗಳಾಗಿತ್ತು. ಅತಿಯಾದ ಕೆಲಸದ ಒತ್ತಡದಿಂದ ಅವಳು ಸಾವನ್ನಪ್ಪಿದ್ದಾಳೆ. ಮಾನವೀಯತೆಯ ದೃಷ್ಟಿಯಿಂದಾದರೂ ಕಂಪೆನಿಯ ಸಿಬ್ಬಂದಿ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಿತ್ತು ಎನ್ನುವ ತಾಯಿಯ ಪತ್ರ ಕಣ್ಣೀರು ತರಿಸುವಂತಿದೆ. ಕಂಪೆನಿಯ ಅಧ್ಯಕ್ಷರಿಗೆ ತಾಯಿ ಬರೆದ ಪತ್ರದಲ್ಲಿ ತನ್ನ ಮಗಳ ಸಾವು ಒಂದು ಎಚ್ಚರಿಕೆಯಾಗಿದೆ. ಕೆಲಸದ ಸಂಸ್ಕೃತಿಯನ್ನು ಸರಿಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಅನಿತಾ ಅವರು ಪತ್ರದಲ್ಲಿ ತಮ್ಮ ಹೃದಯ ಭಾರವಾಗಿದೆ. ಬೇರೆ ಯಾವುದೇ ಕುಟುಂಬ ಈ ರೀತಿಯ ಕಷ್ಟವನ್ನು ಸಹಿಸಬಾರದು ಎಂದು ಹೇಳಿದ್ದಾರೆ. ಕಳೆದ ನವೆಂಬರ್ 23ರಂದು ಅನ್ನಾ ತನ್ನ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಮಾರ್ಚ್ 19 ರಂದು ಪುಣೆಯ ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಸಂಸ್ಥೆಗೆ ಸೇರಿದಳು. ಕೆಲಸಕ್ಕೆ ಸೇರುವಾಗ ಮಗಳಲ್ಲಿ ಕನಸು, ಉತ್ಸಾಹವಿತ್ತು. ಪ್ರತಿಷ್ಠಿತ ಕಂಪೆನಿಯ ಭಾಗವಾಗಲು ರೋಮಾಂಚನಗೊಂಡಿದ್ದಳು. ಆದರೆ ನಾಲ್ಕು ತಿಂಗಳ ಅನಂತರ ಅವಳಿಲ್ಲ ಎನ್ನುವ ಸುದ್ದಿ ತಮಗೆ ಆಘಾತ ನೀಡಿದೆ ಎಂದು ಅನಿತಾ ಹೇಳಿದ್ದಾರೆ.

ಶಿಕ್ಷಣ, ಪಠ್ಯೇತರ ಚಟುವಟಿಕೆಗಳಲ್ಲಿ ಅನ್ನಾ ಉತ್ತಮ ಸಾಧನೆ ಮಾಡಿದ್ದಾಳೆ. ಸಿಎ ಪರೀಕ್ಷೆಗಳಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾಳೆ. ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಸಂಸ್ಥೆಗೆ ಸೇರಿದಾಗ ಅತಿಯಾದ ಕೆಲಸದ ಹೊರೆಯಿಂದಾಗಿ ತನ್ನ ತಂಡದ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡುತ್ತಿರುವುದು ಅನ್ನಾಗೆ ತಿಳಿಯಿತು. ಆದರೆ ಮ್ಯಾನೇಜರ್ ಅವಳ ಆ ಯೋಚನೆಯನ್ನು ಬದಲಾಯಿಸಲು ಕೇಳಿಕೊಂಡರು.

ಅವಳು ಸಂಸ್ಥೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದಳು. ಕೆಲಸದ ಹೊರೆ, ಹೊಸ ಪರಿಸರ ಅವಳ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಯಿತು. ಆತಂಕ, ನಿದ್ರಾಹೀನತೆ ಮತ್ತು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದಳು. ಸೇರಿದ ಕೆಲವೇ ದಿನಗಳಲ್ಲಿ ಕಠಿಣ ಪರಿಶ್ರಮ ಮತ್ತು ಪರಿಶ್ರಮವು ಯಶಸ್ಸಿನ ಕೀಲಿಗಳು ಎಂದು ನಂಬುತ್ತಾ ಅವಳು ಹೆಚ್ಚುಹೆಚ್ಚು ಕೆಲಸದಲ್ಲಿ ತೊಡಗಿಕೊಂಡಳು ಎಂದು ನೆನಪಿಸಿಕೊಂಡಿದ್ದಾರೆ ಅಗಸ್ಟಿನ್.

ಅನ್ನಾ ಅವಳ ಸಿಎ ಘಟಿಕೋತ್ಸವಕ್ಕೆ ಹಾಜರಾಗಲು ಜುಲೈ 6ರಂದು ನಾನು ಪತಿಯೊಂದಿಗೆ ಪುಣೆಗೆ ಹೊಂದಿದ್ದೆ. ಮಗಳ ವಸತಿಗೃಹವನ್ನು ತಲುಪಿದಾಗ ಅವಳು ಎದೆನೋವು ಎಂದು ಹೇಳಿದಳು. ಅವಳ ತಪಾಸಣೆ ನಡೆಸಿದ ಹೃದ್ರೋಗ ತಜ್ಞರು ಅವರು ತುಂಬಾ ತಡವಾಗಿ ತಿನ್ನುತ್ತಾರೆ, ಸಾಕಷ್ಟು ನಿದ್ದೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು.

ಡಾಕ್ಟರ್ ಬಳಿ ಹೋಗಿ ಬಂದ ಬಳಿಕ ತುಂಬಾ ಕೆಲಸವಿದೆ ಮತ್ತು ತನಗೆ ರಜೆ ಸಿಗುವುದಿಲ್ಲ ಎಂದು ಹೇಳಿ ಕೆಲಸಕ್ಕೆ ಹೋದಳು. ಆ ರಾತ್ರಿ ಮತ್ತೆ ತಡವಾಗಿ ಪಿಜಿಗೆ ಮರಳಿದಳು. ಭಾನುವಾರ ಘಟಿಕೋತ್ಸವವಿತ್ತು. ಆ ದಿನ ಮಧ್ಯಾಹ್ನದವರೆಗೂ ಮನೆಯಿಂದ ಕೆಲಸ ಮಾಡುತ್ತಿದ್ದಳು. ಹೀಗಾಗಿ ನಾವು ತಡವಾಗಿ ಘಟಿಕೋತ್ಸವದ ಸ್ಥಳಕ್ಕೆ ತಲುಪಿದೆವು. ನಾವು ನಮ್ಮ ಮಗುವಿನೊಂದಿಗೆ ಕೊನೆಗೆ ಕಳೆದ ಆ ಎರಡು ದಿನವೂ ಅವಳು ಕೆಲಸದ ಒತ್ತಡದಿಂದಾಗಿ ಅದನ್ನು ಆನಂದಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲು ನನ್ನ ಹೃದಯವೇ ಒಡೆದಂತಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅನ್ನಾಳ ಮ್ಯಾನೇಜರ್ ಜೊತೆ ಕೆಲಸ ಮಾಡುವುದು ಕಷ್ಟಕರವಾಗಿರುತ್ತದೆ ಎಂದು ಹಿರಿಯರೊಬ್ಬರು ಕಚೇರಿಯ ಪಾರ್ಟಿಯಲ್ಲಿ ತಮಾಷೆ ಮಾಡಿದ್ದರು. ಅಧಿಕೃತ ಕೆಲಸಗಳನ್ನು ಹೊರತುಪಡಿಸಿ ಬೇರೆ ಕೆಲಸಗಳನ್ನೂ ತನ್ನ ಮಗಳಿಗೆ ನೀಡಲಾಗಿತ್ತು. ವಾರಾಂತ್ಯದಲ್ಲಿಯೂ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದಳು. ಒಂದು ಬಾರಿ ರಾತ್ರಿಯಲ್ಲಿ ಅವಳನ್ನು ಕರೆದು ಮರುದಿನ ಬೆಳಗ್ಗೆ ಪೂರ್ಣಗೊಳಿಸಬೇಕಾದ ಕೆಲಸವನ್ನು ನೀಡಿದರು. ಅನ್ನಾ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಳು. ಗಡುವಿನೊಳಗೆ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದ್ದಳು. ಆದರೆ ಅಗಾಧವಾದ ಒತ್ತಡವು ಅವಳಿಂದ ಸಹಿಸಲು ಅಸಾಧ್ಯವಾಯಿತು.

ಅನ್ನಾ ಆಗಷ್ಟೇ ವೃತ್ತಿ ಜೀವನವನ್ನು ಆರಂಭಿಸುತ್ತಿದ್ದಳು. ಹೀಗಾಗಿ ಕಂಪೆನಿಯ ಅಸಮಂಜಸವಾದ ಬೇಡಿಕೆಗಳನ್ನು ವಿರೋಧಿಸಿದರೆ ತನ್ನ ಭವಿಷ್ಯಕ್ಕೆ ಮುಳುವಾಗಬಹುದು ಎಂದುಕೊಂಡಳು. ಹೀಗಾಗಿ ಹೇಳಿದ ಎಲ್ಲ ಕೆಲಸವನ್ನು ಮಾಡಲು ತನ್ನ ಮಿತಿಯನ್ನು ಮೀರಿ ಪ್ರಯತ್ನಿಸಿದಳು ಎಂದಿದ್ದಾರೆ ಅನಿತಾ.

ಒಂದು ವೇಳೆ ನಾನು ಅವಳ ಆರೋಗ್ಯ ಮತ್ತು ಯೋಗಕ್ಷೇಮವು ಎಲ್ಲಕ್ಕಿಂತ ಹೆಚ್ಚು ಮುಖ್ಯ ಎಂದು ಹೇಳುತ್ತಿದ್ದರೆ ಬಹುಶಃ ಅವಳನ್ನು ರಕ್ಷಿಸಬಹುದಿತ್ತು. ಆದರೆ ಈಗ ತುಂಬಾ ತಡವಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಸಂಸ್ಥೆಯ ಕೆಲಸದ ಸಂಸ್ಕೃತಿಯನ್ನು ನೋಡುವಂತೆ ಮೆಮಾನಿ ಅವರಿಗೆ ಪತ್ರದಲ್ಲಿ ಮನವಿ ಮಾಡಿರುವ ಅಗಸ್ಟಿನ್, ಅನ್ನಾ ತನ್ನ ಮ್ಯಾನೇಜರ್‌ಗಳನ್ನು ಎಂದಿಗೂ ದೂಷಿಸುವುದಿಲ್ಲ. ಅವಳು ತುಂಬಾ ಕರುಣಾಮಯಿ. ಆದರೆ ನಾನು ಮೌನವಾಗಿರಲು ಸಾಧ್ಯವಿಲ್ಲ. ಹೊಸಬರಿಗೆ ಈ ರೀತಿ ಕೆಲಸದ ಹೊರೆ ಹೊರಿಸುವುದು, ಭಾನುವಾರ ಸಹ ಹಗಲು ರಾತ್ರಿ ಕೆಲಸ ಮಾಡುವಂತೆ ಮಾಡುವುದು ಸರಿಯಲ್ಲ ಎಂದು ಅನ್ನಾ ತಾಯಿ ಹೇಳಿದ್ದಾರೆ.

ಭರವಸೆ ಮತ್ತು ಕನಸುಗಳಿಂದ ಇವೈಗೆ ಸೇರುವ ಪ್ರತಿಯೊಬ್ಬ ಯುವ ವೃತ್ತಿಪರರ ಬಗ್ಗೆಯೂ ಸಂಸ್ಥೆ ಕಾಳಜಿ ವಹಿಸಬೇಕು ಎನ್ನುವ ಉದ್ದೇಶ ಈ ಪತ್ರದ್ದು ಎಂದು ಹೇಳಿರುವ ಅನಿತಾ, ಅನ್ನಾ ಅವಳ ಸಾವು ಸಂಸ್ಥೆಗೆ ಎಚ್ಚರಿಕೆ. ಸಂಸ್ಥೆಯೊಳಗಿನ ಕೆಲಸದ ಸಂಸ್ಕೃತಿ ಬದಲಾಯಿಸಲು, ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮಕ್ಕೆ ಆದ್ಯತೆ ನೀಡಲು ಇದು ಸಮಯವಾಗಿದೆ. ಉದ್ಯೋಗಿಗಳು ನಿರ್ಭಿತಿಯಿಂದ ಮಾತನಾಡಲು, ಕೆಲಸದ ಹೊರೆ ನಿರ್ವಹಿಸಲು ಬೆಂಬಲ ಪಡೆಯಲು ಮತ್ತು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡದಿರುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದ್ದಾರೆ.

ಅನ್ನಾ ಅಂತ್ಯಕ್ರಿಯೆಯಲ್ಲಿ ಸಂಸ್ಥೆಯಿಂದ ಯಾರೂ ಭಾಗವಹಿಸಲಿಲ್ಲ. ಇದು ಕುಟುಂಬಕ್ಕೆ ಅತ್ಯಂತ ನೋವುಂಟು ಮಾಡಿದೆ. ಇದು ಸಹಾನುಭೂತಿಯ ಕೊರತೆಯನ್ನು ಸೂಚಿಸುತ್ತದೆ. ಅಂತ್ಯಕ್ರಿಯೆಯ ಬಳಿಕ ಅನ್ನಾ ಅವರ ವ್ಯವಸ್ಥಾಪಕರನ್ನು ಸಂಪರ್ಕಿಸಿದೆ. ಆದರೆ ಅವರಿಂದ ಯಾವುದೇ ಉತ್ತರವಿಲ್ಲ ಎಂದು ಅನಿತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಗುವಿನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ತಾಯಿಯ ಭಾವನೆಗಳನ್ನು ಯಾರಾದರೂ ಅರ್ಥಮಾಡಿಕೊಳ್ಳುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ಅವಳನ್ನು ನಾನು ನನ್ನ ತೋಳುಗಳಲ್ಲಿ ಹಿಡಿದಿದ್ದೆ. ಆಡುವುದು, ಬೆಳೆಯುವುದನ್ನು ನೋಡಿದ್ದೇನೆ. ಅಳುವುದು ಮತ್ತು ಕನಸುಗಳನ್ನು ಹಂಚಿಕೊಳ್ಳುವುದನ್ನು ಕಂಡಿದ್ದೇನೆ. ನನ್ನ ಮಗುವಿನ ಅನುಭವವು ಇನ್ನೊಬ್ಬರ ಬದುಕಿನ ಬದಲಾವಣೆಗೆ ಕಾರಣವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನಾವು ಅನುಭವಿಸುತ್ತಿರುವ ದುಃಖ ಮತ್ತು ಆಘಾತ ಇನ್ನು ಬೇರೆ ಯಾವುದೇ ಕುಟುಂಬವು ಸಹಿಸದಿರಲಿ ಎಂದು ಹೇಳಿ ತಮ್ಮ ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.

Self Harming

ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಪ್ರತಿಕ್ರಿಯೆ

ಅನ್ನಾ ಅವರ ಸಾವನ್ನು ತುಂಬಲಾರದ ನಷ್ಟ ಎಂದು ಬಣ್ಣಿಸಿದ ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ, ಅನ್ನಾ ಸೆಬಾಸ್ಟಿಯನ್ ಅವರ ದುರಂತ ಮತ್ತು ಅಕಾಲಿಕ ಮರಣದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ನಮ್ಮ ಆಳವಾದ ಸಂತಾಪವನ್ನು ದುಃಖಿತ ಕುಟುಂಬಕ್ಕೆ ಸಲ್ಲಿಸುತ್ತೇವೆ. ಆಕೆಯ ಭರವಸೆಯ ವೃತ್ತಿಜೀವನವನ್ನು ಈ ದುರಂತ ರೀತಿಯಲ್ಲಿ ಮೊಟಕುಗೊಳಿಸಿರುವುದು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಆದರೆ ಕುಟುಂಬವು ಅನುಭವಿಸಿದ ನಷ್ಟವನ್ನು ಯಾವುದೇ ಕ್ರಮದಿಂದ ಸರಿದೂಗಿಸಲು ಸಾಧ್ಯವಿಲ್ಲ. ಇಂತಹ ಸಂಕಟದ ಸಮಯದಲ್ಲಿ ನಾವು ಯಾವಾಗಲೂ ಸಹಾಯ ಮಾಡುತ್ತೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Self Harming: ಅತಿಯಾದ ಕೆಲಸದ ಒತ್ತಡ ತಾಳಲಾರದೆ 26 ವರ್ಷದ ಯುವತಿ ಆತ್ಮಹತ್ಯೆ

ಕುಟುಂಬದ ಪತ್ರವ್ಯವಹಾರವನ್ನು ಅತ್ಯಂತ ಗಂಭೀರತೆ ಮತ್ತು ನಮ್ರತೆಯಿಂದ ತೆಗೆದುಕೊಳ್ಳುತ್ತಿದ್ದೇವೆ. ನಾವು ಎಲ್ಲಾ ಉದ್ಯೋಗಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಮತ್ತು ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಸದಸ್ಯ ಸಂಸ್ಥೆಗಳಾದ್ಯಂತ ನಮ್ಮ 1,00,000 ಜನರಿಗೆ ಆರೋಗ್ಯಕರ ಕೆಲಸದ ಸ್ಥಳವನ್ನು ಸುಧಾರಿಸಲು ಮತ್ತು ಒದಗಿಸುವ ಮಾರ್ಗಗಳನ್ನು ಕಂಡುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ.