Monday, 14th October 2024

Self Harming: ಅತಿಯಾದ ಕೆಲಸದ ಒತ್ತಡ ತಾಳಲಾರದೆ 26 ವರ್ಷದ ಯುವತಿ ಆತ್ಮಹತ್ಯೆ

Self Harming

ಮುಂಬೈ: ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಆತ್ಮಹತ್ಯೆ (Self Harming) ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಪುಣೆಯ ಬಹುರಾಷ್ಟ್ರೀಯ ಕನ್ಸಲ್ಟಿಂಗ್‌ ಕಂಪನಿ ಅರ್ನ್ಸ್ಟ್ & ಯಂಗ್ (Ernst & Young-EY)ನ ಉದ್ಯೋಗಿ, 26 ವರ್ಷದ ಯುವತಿ ಅನ್ನಾ ಸೆಬಾಸ್ಟಿನ್‌ ಪೆರಾಯಿಲ್‌. ಅತಿಯಾದ ಕೆಲಸದ ಒತ್ತಡದಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಮ್ಮ ಮಗಳು ಅತಿಯಾದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವತಿಯ ತಾಯಿ ಅನಿತಾ ಆಗಸ್ಟಿನ್‌ ಆರೋಪಿಸಿದ್ದಾರೆ. ʼʼತಮ್ಮ ಮಗಳು ಇ.ವೈ. ಕಂಪನಿಗೆ ಚಾರ್ಟಡ್‌ ಅಕೌಂಟೆಂಟ್‌ ಆಗಿ 4 ತಿಂಗಳ ಹಿಂದೆ ಸೇರಿದ್ದಳು. ಕೆಲಸದ ಒತ್ತಡದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡದ್ದಾಳೆʼʼ ಎಂದು ಅನಿತಾ ಅಗಸ್ಟಿನ್ ಇ.ವೈ. ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದು ತಮ್ಮ ಮಗಳ ಮೊದಲ ಕೆಲಸವಾಗಿತ್ತು ಮತ್ತು ಅರ್ನ್ಸ್ಟ್ & ಯಂಗ್ ಕಂಪನಿಗೆ ಸೇರುವ ಬಗ್ಗೆ ಆಕೆ ತುಂಬ ಉತ್ಸುಕಳಾಗಿದ್ದಳು. ಆದರೆ ಉದ್ಯೋಗಕ್ಕೆ ಸೇರಿದ ಕೇವಲ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆಯಿಂದ ಬಲಿಯಾಗಿದ್ದಾಳೆ. ಅನ್ನಾ ತಡರಾತ್ರಿ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು ಅನಿತಾ ಆಗಸ್ಟಿನ್‌ ವಿವರಿಸಿದ್ದಾರೆ. ಅನ್ನಾ ಅಂತ್ಯ ಸಂಸ್ಕಾರದಲ್ಲಿ ಕಂಪನಿಯ ಯಾರೂ ಪಾಲ್ಗೊಂಡಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ʼʼಅನ್ನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಶಾಲೆ ಮತ್ತು ಕಾಲೇಜಿನಲ್ಲಿ ಟಾಪರ್‌ ಆಗಿದ್ದಳು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದಳು. ಸಿಎ ಕೋರ್ಸ್‌ ಅನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಮಾಡಿದ್ದಳು. ಕೆಲಸದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಳು. ಅದಾಗ್ಯೂ ಕೆಲಸದ ಒತ್ತಡ, ಹೊಸ ವಾತಾವರಣದಿಂದ ಆಕೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಇದು ಆಕೆಯ ಮೇಲೆ ಪರಿಣಾಮ ಬೀರಿತುʼʼ ಎಂದು ಅನಿತಾ ಪತ್ರದಲ್ಲಿ ವಿವರಿಸಿದ್ದಾರೆ.

ಅನ್ನಾ 2024ರ ಮಾರ್ಚ್‌ 19ರಂದು ಪುಣೆಯ ಇ.ವೈ. ಕಂಪನಿಗೆ ಸೇರಿದ್ದರು. ಇದಾಗಿ 4 ತಿಂಗಳ ನಂತರ ಅಂದರೆ ಜುಲೈ 20 ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲಸದ ಹೊರೆಯಿಂದಾಗಿ ಹಲವು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ʼʼಅನ್ನಾಗೆ ಮ್ಯಾನೇಜರ್‌ ಅವಧಿ ಮುಗಿದ ಬಳಿಕವೂ ಕೆಲಸ ವಹಿಸುತ್ತಿದ್ದರು. ಓವರ್‌ ಟೈಮ್‌ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕುತ್ತಿದ್ದರುʼʼ ಎಂದು ಅನಿತಾ ಆರೋಪಿಸಿದ್ದಾರೆ. ʼʼಕೆಲವೊಮ್ಮೆ ರಾತ್ರಿ ಇಡೀ ಕೆಲಸ ನಿರ್ವಹಿಸಬೇಕಿತ್ತು. ಅಲ್ಲದೆ ಭಾನುವಾರವೂ ಕೆಲಸದ ಹೊರೆ ಹೊರಿಸುತ್ತಿದ್ದರು. ಪದೇ ಪದೆ ಮೀಟಿಂಗ್‌ ಆಯೋಜಿಸಿ ಬೇರೆ ಬೇರೆ ಜವಾಬ್ದಾರಿ ವಹಿಸಲಾಗುತ್ತಿತ್ತುʼʼ ಎಂದು ತಿಳಿಸಿದ್ದಾರೆ.

ಕೆಲಸದ ಶೈಲಿ ಬದಲಾಯಿಸಿ

ಉದ್ಯೋಗಿಗಗಳ ಮೇಲೆ ಒತ್ತಡ ಹೇರುವಂತಹ ಇಂತಹ ಶೈಲಿಯನ್ನು ಬದಲಾಯಿಸಿಕೊಳ್ಳಲು ಈ ಪತ್ರ ಬರೆಯುತ್ತಿರುವುದಾಗಿ ಅನಿತಾ ತಿಳಿಸಿದ್ದಾರೆ. ತನ್ನ ಮಗಳ ಸಾವು ಎಚ್ಚರಿಕೆಯ ಗಂಟೆಯಾಗು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ. ʼʼರಾಜೀವ್‌ ಉದ್ಯೋಗಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ನನ್ನ ಮಗಳ ಸಾವು ಬದಲಾವಣೆಗೆ ನಾಂದಿ ಹಾಡಲಿದೆ ಎನ್ನುವ ವಿಶ್ವಾಸವಿದೆ. ನಮ್ಮಂತೆ ಬೇರೆ ಯಾವ ಕುಟುಂಬವೂ ಈ ರೀತಿಯ ನೋವು ಅನುಭವಿಸದಿರಲಿʼʼ ಎಂದು ಅನಿತಾ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Theft Case: ಟೊಮೆಟೊ ಬೆಳೆ ನಷ್ಟ ತುಂಬಲು 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ ಕದ್ದು ಸಿಕ್ಕಿಬಿದ್ದ ಟೆಕ್ಕಿ!