ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ (Chhattisgarh Bastar region) ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ನಡುವಿನ ದಟ್ಟವಾದ ಅಬುಜ್‌ಮಾರ್ ಅರಣ್ಯದಲ್ಲಿ (Abujmarh forest) 28 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ (Anti Naxal Operation) ಭದ್ರತಾ ಸಿಬ್ಬಂದಿ ಶುಕ್ರವಾರ ಕನಿಷ್ಠ 31 ಶಂಕಿತ ಮಾವೋವಾದಿಗಳನ್ನು (Maoists) ಕೊಂದಿದ್ದಾರೆ. ಮೃತರಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿ ಕಮಾಂಡರ್‌ಗಳಲ್ಲಿ ಒಬ್ಬನಾದ ಕಮಲೇಶ್ ಅಲಿಯಾಸ್ ಆರ್.ಕೆ. ಕೂಡ ಸೇರಿದ್ದಾನೆ.
ಅಬುಜ್‌ಮಾರ್ ಅರಣ್ಯವನ್ನು “ಅಜ್ಞಾತ ಬೆಟ್ಟಗಳು” ಎಂದು ಕರೆಯಲಾಗುತ್ತದೆ. ಇದು ಬಸ್ತಾರ್‌ನಲ್ಲಿ ಬಹಳ ಹಿಂದಿನಿಂದಲೂ ಮಾವೋವಾದಿಗಳ ಭದ್ರಕೋಟೆಯಾಗಿದೆ. ನಿಗೂಢವಾಗಿರುವುದರಿಂದ ಭದ್ರತಾ ಪಡೆಗಳಿಗೆ ಇದರೊಳಗೆ ಪ್ರವೇಶಿಸುವುದು ಕಷ್ಟದ ಕಾರ್ಯವಾಗಿದೆ.
ಭದ್ರತಾ ಪಡೆಯ ಶುಕ್ರವಾರದ ಕಾರ್ಯಾಚರಣೆ ಎಡಪಂಥೀಯ ಉಗ್ರವಾದಕ್ಕೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ಮೋಸ್ಟ್ ವಾಂಟೆಡ್ ಕಮಾಂಡರ್‌ಗಳಲ್ಲಿ ಒಬ್ಬನಾದ ಕಮಲೇಶ್ ಅಲಿಯಾಸ್ ಆರ್.ಕೆ. ಮತ್ತು ಗುಂಪಿನ ವಕ್ತಾರ ನಿತಿ ಅಲಿಯಾಸ್ ಊರ್ಮಿಳಾ ಅವರನ್ನು ಹತ್ಯೆ ಮಾಡಿದೆ. ಇವರಿಬ್ಬರು ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ ಪ್ರಮುಖರಾಗಿದ್ದರು.
ಮೂಲತಃ ಆಂಧ್ರಪ್ರದೇಶದ ವಿಜಯವಾಡದವನಾದ ಕಮಲೇಶ್ ಸಿವಿಲ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಐಟಿಐ) ವಿದ್ಯಾರ್ಥಿಯಾಗಿದ್ದ. ಉತ್ತರ ಬಸ್ತಾರ್, ತೆಲಂಗಾಣದ ನಲ್ಗೊಂಡ, ಬಿಹಾರದ ಮನ್ಪುರ್ ಮತ್ತು ಒಡಿಶಾ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಆತನ ಚಟುವಟಿಕೆ ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರದಾದ್ಯಂತ ವಿಸ್ತರಿಸಿತು. ಬಿಜಾಪುರದ ಗಂಗಲೂರು ಮೂಲದ ಊರ್ಮಿಳಾ ವಿಶೇಷ ವಲಯ ಸಮಿತಿ ಸದಸ್ಯಳಾಗಿದ್ದಳು.
ಕಾರ್ಯಾಚರಣೆ ಹೇಗಿತ್ತು?
50 ಮಾವೋವಾದಿಗಳ ಉಪಸ್ಥಿತಿಯ ಕುರಿತು ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಕಮಲೇಶ್, ಊರ್ಮಿಳಾ, ಮತ್ತೊಬ್ಬ ವಾಂಟೆಡ್ ಕಮಾಂಡರ್ ನಂದು ಮತ್ತು ಇತರ ಮಾವೋವಾದಿಗಳು ಓರ್ಚಾ ಮತ್ತು ಬಾರ್ಸೂರು ಪೊಲೀಸ್ ಠಾಣಾ ವ್ಯಾಪ್ತಿಯ ತುಳುತುಳಿ ಮತ್ತು ನೆಂದೂರು ಗ್ರಾಮಗಳ ನಡುವಿನ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು ಎನ್ನುವ ಮಾಹಿತಿ ಗುಪ್ತಚರರಿಂದ ಲಭ್ಯವಾಗಿತ್ತು.
ಜಿಲ್ಲಾ ರಿಸರ್ವ್ ಗಾರ್ಡ್, ವಿಶೇಷ ಕಾರ್ಯಪಡೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯದೊಳಗೆ 25 ಕಿಲೋ ಮೀಟರ್ ದೂರ ಚಾರಣ ಮಾಡಿ ಅನಂತರ ಭದ್ರತಾ ಪಡೆಗಳು ಎರಡು ಕಡೆಯಿಂದ ದಾಳಿ ನಡೆಸಿದರು. ಇದು ಮಾವೋವಾದಿಗಳನ್ನು ಆಶ್ಚರ್ಯಚಕಿತಗೊಳಿಸಿತು.
ಇದರಿಂದ ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಇದುವರೆಗೆ 31 ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಲಘು ಮೆಷಿನ್ ಗನ್, ಎಕೆ -47, ಸ್ವಯಂ-ಲೋಡಿಂಗ್ ರೈಫಲ್ಸ್ , ಐಎನ್‌ಎಸ್‌ಎಎಸ್ ರೈಫಲ್‌ಗಳು ಮತ್ತು 303 ಕ್ಯಾಲಿಬರ್ ಬಂದೂಕುಗಳಂತಹ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಕ್ರಾಸ್‌ಫೈರ್‌ನಲ್ಲಿ ಡಿಆರ್‌ಜಿ ಜವಾನ್ ರಾಮಚಂದ್ರ ಯಾದವ್ ಗಾಯಗೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಪಲಾಯನ ಮಾಡಿರುವ ಉಳಿದ ಮಾವೋವಾದಿಗಳನ್ನು ಸೆರೆಹಿಡಿಯಲು ಪ್ರಯತ್ನಗಳು ನಡೆಸಲಾಗುತ್ತಿದೆ.
6 ತಿಂಗಳಲ್ಲಿ 3 ಯಶಸ್ಸು
ಬಸ್ತಾರ್ ಪ್ರದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಕಿತ್ತೊಗೆಯಲು ಈ ಎನ್‌ಕೌಂಟರ್ ಒಂದು ದೊಡ್ಡ ಮಟ್ಟದ ಯಶಸ್ಸು ಎಂದು ಪರಿಗಣಿಸಲಾಗಿದೆ. ಇದಕ್ಕೂ ಮೊದಲು ಏಪ್ರಿಲ್ 15 ರಂದು ಕಂಕೇರ್ ಜಿಲ್ಲೆಯಲ್ಲಿ ನಡೆದ ಭಾರೀ ಎನ್‌ಕೌಂಟರ್‌ನಲ್ಲಿ 15 ಮಹಿಳೆಯರು ಸೇರಿದಂತೆ 29 ಮಾವೋವಾದಿಗಳ ಸಾವನ್ನಪ್ಪಿದ್ದರು.
ಆಗಸ್ಟ್ 29 ರಂದು ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದ ನಾರಾಯಣಪುರ ಮತ್ತು ಕಂಕೇರ್ ಗಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಸಮವಸ್ತ್ರಧಾರಿ ಮಹಿಳಾ ಮಾವೋವಾದಿಗಳು ಸಾವನ್ನಪ್ಪಿದ್ದು ಅವರನ್ನು ಉತ್ತರ ಬಸ್ತಾರ್ ವಿಭಾಗ ಸಮಿತಿ ಮತ್ತು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಕಂಪನಿ ನಂ.5 ಸದಸ್ಯರು ಎಂದು ಗುರುತಿಸಲಾಗಿದೆ.
ಈ ವರ್ಷ ಛತ್ತೀಸ್‌ಗಢದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 180 ಕ್ಕೂ ಹೆಚ್ಚು ಮಾವೋವಾದಿಗಳನ್ನು ಕೊಲ್ಲಲಾಗಿದೆ. ಕಳೆದ ವರ್ಷ ಬಸ್ತಾರ್‌ನಲ್ಲಿ 212 ಕ್ಕೂ ಹೆಚ್ಚು ಮಾವೋವಾದಿಗಳನ್ನು ಬಂಧಿಸಲಾಗಿದ್ದು, 201 ಮಂದಿ ಶರಣಾಗಿದ್ದರು.
ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಕೇಂದ್ರದ ಶಕ್ತಿ
ಛತ್ತೀಸ್‌ಗಢದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳು ಕೇಂದ್ರ ಸರ್ಕಾರದ ಕಾರ್ಯತಂತ್ರದ ಭಾಗವಾಗಿದೆ. ಆಗಸ್ಟ್ 23ರಿಂದ 25ರವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಅನಂತರ ಈ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ.
ಇದಕ್ಕಾಗಿ ಉನ್ನತ ಮಟ್ಟದ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಾ ಅವರು ಏಳು ಮಾವೋವಾದಿ ಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳನ್ನು ಒಳಗೊಂಡ ಅಂತರ- ರಾಜ್ಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದು, ಎಡಪಂಥೀಯ ಉಗ್ರವಾದದ ವಿರುದ್ಧ ಸರ್ಕಾರದ ನಿಲುವು ದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.